

ಹೈದರಾಬಾದ್: ಡಿ.04ರಂದು ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' (Pushpa 2) ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟ ಘಟನೆ ಇಡೀ ಟಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಮೃತ ಮಹಿಳೆಯನ್ನು ಹೈದರಾಬಾದ್ನ ದಿಲ್ಸುಖ್ನಗರ ಮೂಲದ ರೇವತಿ (39) ಎಂದು ಗುರುತಿಸಲಾಗಿದ್ದು, ಕಾಲ್ತುಳಿತದ ವೇಳೆ ರೇವತಿ ಪುತ್ರ ತೇಜ್ (9) ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಮಗನ ಪರಿಸ್ಥಿತಿ ನೆನೆದು ತಂದೆ ಭಾಸ್ಕರ್ ಕಣ್ಣೀರಿಡುತ್ತಿದ್ದಾರೆ.
ರೇವತಿ ತನ್ನ ಪತಿ ಭಾಸ್ಕರ್ ಮತ್ತು ಮಕ್ಕಳಾದ ತೇಜ್ (9) ಮತ್ತು ಸಾನ್ವಿಕ್ (7) ಅವರೊಂದಿಗೆ ಸಂಧ್ಯಾ ಥಿಯೇಟರ್ನಲ್ಲಿ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ನಾ ಮುಂದು ತಾ ಮುಂದು ಎಂದು ಅಭಿಮಾನಿಗಳು ಮುಗಿಬಿದ್ದ ಕಾರಣ ಚಿತ್ರಮಂದಿರದಲ್ಲಿ ಕಾಲ್ತುಳಿತ ಉಂಟಾಗಿದೆ. ಚಿತ್ರ ನೋಡಲು ಪತಿ ಮತ್ತು ಮಕ್ಕಳೊಂದಿಗಿದ್ದ ರೇವತಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದರೆ, ಪುತ್ರ ತೇಜ್ ಚಿಂತಾಜನಕ ಸ್ಥಿತಿ ತಲುಪಿದ್ದಾನೆ. ಘಟನೆಯ ಬೆನ್ನಲ್ಲೇ ಅಲ್ಲು ಅರ್ಜುನ್ ಮೃತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದು, ವೈಯಕ್ತಿಕವಾಗಿ ಇನ್ನಿತರ ಸಹಾಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
'ಪುಷ್ಪ 2' ದುರಂತ ಘಟನೆ ನಡೆಯುವ ಕೆಲವು ತಿಂಗಳ ಹಿಂದೆ ಭಾಸ್ಕರ್ ಪತ್ನಿ ರೇವತಿ ತಮ್ಮ ಪತಿಗೆ ಯಕೃತ್ತು ದಾನ ಮಾಡಿದ್ದರು. ಪತ್ನಿಯ ತ್ಯಾಗದಿಂದ ಲಿವರ್ ಕಸಿ ಮಾಡಿಸಿಕೊಂಡ ಭಾಸ್ಕರ್, ಇದೀಗ ಅವರ ಹಠಾತ್ ಸಾವಿನಿಂದ ಕಂಗಾಲಾಗಿದ್ದಾರೆ. ಹೆಂಡತಿಯ ಬಗ್ಗೆ ಭಾವುಕರಾಗಿ ಮಾತನಾಡಿದ ಭಾಸ್ಕರ್, ನಾನು ಅನಾರೋಗ್ಯದಿಂದ ನೆಲಕಚ್ಚಿದಾಗ, ನನಗೆ ಹೊಸ ಜೀವನ ಕೊಟ್ಟಿದ್ದು ನನ್ನವಳು. ಆದರೆ, ಇಂದು ಆಕೆಯೇ ನನ್ನೊಂದಿಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).