ರಾಜಕಾಲುವೆ ಮೇಲಿನ ಮಳಿಗೆ ತೆರವುಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಖಡಕ್ ಸೂಚನೆ

bbmp office
Published on

ಬೆಂಗಳೂರು: ನಗರದ ಕೆ.ಆರ್. ಮಾರುಕಟ್ಟೆ ಕಾಂಪ್ಲೆಕ್ಸ್ ಮುಖ್ಯದ್ವಾರದ ಬಳಿಯಿರುವ ರಾಜಕಾಲುವೆ ಮೇಲೆ ನಿರ್ಮಿಸಿರುವ ಅಂಗಡಿಯನ್ನು ತೆರವುಗೊಳಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಶುಕ್ರವಾರ ನಾಗರಿಕರ ಕುಂದು-ಕೊರತೆ ಆಲಿಕೆ ವೇಳೆ ನಾಗರಿಕರೊಬ್ಬರು ಕೆ.ಆರ್.ಮಾರುಕಟ್ಟೆ ಬಗ್ಗೆ ಸಮಸ್ಯೆ ತೋಡಿಕೊಂಡರು. ಈ ಪ್ರದೇಶವು ಮಾರುಕಟ್ಟೆ ಪ್ರವೇಶಿಸಲು ಆಯಾಕಟ್ಟಿನ ಜಾಗವಾಗಿದ್ದು, ಹೆಚ್ಚಿನ ವ್ಯಾಪಾರಿಗಳು ಹಾಗೂ ನಾಗರಿಕರು ಇದೇ ಮಾರ್ಗವಾಗಿ ನಡೆದುಹೋಗಬೇಕಿದೆ. ಆದರೆ, ಒತ್ತುವರಿ ಮಾಡಿಕೊಂಡು ಮಳಿಗೆ ನಿರ್ಮಿಸಿದ್ದು, ಸಮಸ್ಯೆ ಸೃಷ್ಟಿಸಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ವಲಯ ಮುಖ್ಯ ಅಭಿಯಂತರರು ಹಾಗೂ ರಾಜಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರು ಸ್ಥಳ ಪರಿಶೀಲಿಸಿ ನಡೆಸಿ ಅನಧಿಕೃತವೆಂದು ದೃಢಪಟ್ಟಲ್ಲಿ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ನಿರ್ದೇಶಿಸಿದರು.

ಮಲ್ಲೇಶ್ವರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ವ್ಯಾಪಾರ ವಲಯಗಳಲ್ಲದ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಹಾಗಾಗಿ ಪಾಲಿಕೆ ಕೈಗೊಂಡಿರುವ ಸಮೀಕ್ಷೆ ಬಳಿಕ ಪ್ರತ್ಯೇಕ ವ್ಯಾಪಾರ ವಲಯ ಗುರುತಿಸಲಾಗುತ್ತದೆ ಎಂದು ನಾಗರಿಕರ ದೂರಿಗೆ ಸ್ಪಂದಿಸಿದರು.

ಘನತ್ಯಾಜ್ಯ ಘಟಕಕ್ಕೆ ಪ್ರಸ್ತಾವನೆ:

ಜಕ್ಕರಾಯನ ಕೆರೆ ಆಟದ ಮೈದಾನದ ಜಾಗದಲ್ಲಿ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ನಿರ್ಮಿಸಲು ಸಲಹೆ ಕೇಳಿಬಂದಿದೆ. ಇಲ್ಲಿ ಸುಮಾರು 5 ಎಕರೆ ಜಾಗವಿದ್ದು, ಪೊಲೀಸ್ ಇಲಾಖೆಯವರು ವಾಹನ ನಿಲುಗಡೆ ಬಳಸುತ್ತಿದ್ದಾರೆ. ಇದರ ಬದಲು ಈ ಜಾಗ ಸ್ವಚ್ಛಗೊಳಿಸಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆದು ಘಟಕ ಸ್ಥಾಪಿಸಬಹುದಾಗಿದ್ದು, ಉದ್ಯಾನ ನಿರ್ಮಾಣ ಮಾಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net