

ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ, ಟಾಲಿವುಡ್ನ ಐಕಾನ್ ಸ್ಟಾರ್, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪುಷ್ಪ 2’ ರಿಲೀಸ್ ಬಗ್ಗೆ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿದೆ. ಈ ಮೊದಲು ಚಿತ್ರತಂಡ ತಿಳಿಸಿದಂತೆ ಸಿನಿಮಾ ಇದೇ ಆಗಸ್ಟ್ 15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಚಿತ್ರದ ಕೆಲವು ಕೆಲಸಗಳು ಇನ್ನೂ ಬಾಕಿ ಉಳಿದ ಕಾರಣ ರಿಲೀಸ್ ಡೇಟ್ ಅನ್ನು ಡಿಸೆಂಬರ್ 06, 2024ಕ್ಕೆ ಮುಂದೂಡಲಾಗಿತ್ತು. ಆದ್ರೆ, ಇದೀಗ ಮತ್ತೊಮ್ಮೆ ಅಲ್ಲು ಅರ್ಜುನ್ ಚಿತ್ರವನ್ನು ಮುಂದೂಡಲಾಗುವುದು ಎಂಬ ಸುದ್ದಿ ಸದ್ಯ ಭಾರೀ ಗೊಂದಲವನ್ನು ಹುಟ್ಟುಹಾಕಿದೆ.
ಈ ಹಿಂದೆ ಚಿತ್ರತಂಡ ಘೋಷಿಸಿದ್ದ ಅಧಿಕೃತ ಮಾಹಿತಿಯ ಮೇರೆಗೆ ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿಮಾ ವರ್ಷದ ಕೊನೆಗೆ ಹೋಯಿತು ಎಂಬ ಬೇಸರ ಹೊರಹಾಕಿದ್ದರು. ಅಲ್ಲು ಅರ್ಜುನ್ ನಟನೆಯನ್ನು ಕಣ್ತುಂಬಿಕೊಳ್ಳಲು ಬಹಳ ಕಾತರದಿಂದ ರಿಲೀಸ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಮ್ಮೆ ಗೊಂದಲದ ಸುದ್ದಿ ಎದುರಾಗಿದೆ. ವದಂತಿಗಳ ಪ್ರಕಾರ, ಎರಡನೇ ಬಾರಿಗೆ ನಿಗದಿಪಡಿಸಲಾಗಿದ್ದ ದಿನದಂದು ಕೂಡ ಅಲ್ಲು ಅರ್ಜುನ್ ಚಿತ್ರ ತೆರೆಕಾಣುವುದು ಬಹುತೇಕ ಡೌಟ್ ಎಂದೇ ಹೇಳಲಾಗಿದೆ.
ಪ್ಯಾನ್ ಇಂಡಿಯಾ ಪುಷ್ಪ 2 ಸಿನಿಮಾದ ಅನಿಯಮಿತ ಚಿತ್ರೀಕರಣದ ವೇಳಾಪಟ್ಟಿಯಿಂದ ಅಲ್ಲು ಅರ್ಜುನ್ ಅತೃಪ್ತರಾಗಿದ್ದಾರೆ ಎನ್ನಲಾಗಿದ್ದು, ತಮ್ಮದೊಂದು ಪಾತ್ರಕ್ಕೆ ಅಗತ್ಯವಿರುವಂತೆ ತಯಾರಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಮ್ಮ ಗಡ್ಡವನ್ನು ಸಹ ಟ್ರಿಮ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಚಿತ್ರೀಕರಣದಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಐಕಾನ್ ಸ್ಟಾರ್, ತಮ್ಮ ಕುಟುಂಬದೊಂದಿಗೆ ಯುರೋಪ್ಗೆ ಪ್ರಯಾಣಿಸಿದ್ದಾರೆ. ಈ ಮಧ್ಯೆ ನಿರ್ದೇಶಕರೂ ಕೂಡ ಅಮೇರಿಕಾಗೆ ಹೋಗಿರುವುದು ಚಿತ್ರದ ವಿಳಂಬಕ್ಕೆ ಕಾರಣವಾಗಿದೆ.
ಕೆಲವರು ಅಲ್ಲು ಅರ್ಜುನ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಜತೆಗೆ ಸಿನಿಮಾ ಮುಂದೂಡಿಕೆಯಾಗುವ ಸುದ್ದಿ ಕೂಡ ಸುಳ್ಳು ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಹರಿದಾಡುತ್ತಿರುವ ವದಂತಿಗಳ ಕುರಿತು ಚಿತ್ರದ ನಿರ್ಮಾಪಕರು ಏನು ಹೇಳಲಿದ್ದಾರೆ? ರಿಲೀಸ್ ಡೇಟ್ ಬಗ್ಗೆ ಇರುವ ಸುದ್ದಿಗಳು ನಿಜವೇ ಎಂಬುದನ್ನು ಶೀಘ್ರವೇ ಸ್ಪಷ್ಟಪಡಿಸಲಿದ್ದಾರಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ. ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್, ಫಹದ್ ಫಾಸಿಲ್, ಸುನಿಲ್, ಅನಸೂಯಾ ಭಾರದ್ವಾಜ್, ರಶ್ಮಿಕಾ ಮಂದಣ್ಣ, ರಾವ್ ರಮೇಶ್, ಸುನಿಲ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).