

ಕೆ.ಎನ್.ರಾಘವೇಂದ್ರ ಮಂಡ್ಯ
ಜಿಲ್ಲೆಯಲ್ಲಿ ಅಸ್ಥಿತ್ವಕ್ಕಾಗಿ ಹವಣಿಸುತ್ತಿದ್ದ ಜೆಡಿಎಸ್‌ಗೆ ಲೋಕಸಭಾ ಚುನಾವಣೆಯ ಗೆಲುವು ಮರು ಹುಟ್ಟು ನೀಡಿದೆ. ಆದರೆ ಸ್ಥಳೀಯ ನಾಯಕರ ನಡುವಿನ ಮುನಿಸು ಮಾತ್ರ ಇನ್ನೂ ತಣಿದಿಲ್ಲ. ಇದಕ್ಕೆ ಇತ್ತೀಚೆಗೆ ಪಾಂಡವಪುರದಲ್ಲಿ ನಡೆದ ಅಭಿನಂದನಾ ಸಮಾರಂಭ ಸಾಕ್ಷಿಯಾಗಿದೆ.
ಕೇಂದ್ರ ಸಚಿವರಾದ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಅದ್ದೂರಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಜೆಡಿಎಸ್‌ನ ಹಿರಿಯ ನಾಯಕರೆಲ್ಲರೂ ಆಗಮಿಸಿದ್ದರು. ಆದರೆ ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಮಾಜಿ ಶಾಸಕ ಕೆ.ಸುರೇಶ್‌ಗೌಡ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮಾತ್ರವಲ್ಲದೆ ಚರ್ಚೆಗೂ ಗ್ರಾಸವಾಗಿದೆ.
ಸ್ಪರ್ಧೆಗೆ ಕಾರಣಕರ್ತರು: 2018ರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಗೆಲುವಿನ ನಂತರ ದಳದ ಒಗ್ಗಟ್ಟು ಹಳಿ ತಪ್ಪಿತ್ತು. ಇದರ ಪರಿಣಾಮ ಚುನಾವಣೆಯಲ್ಲಿ ಸತತ ಸೋಲು ಎದುರಿಸುವಂತಾಯಿತು. ಲೋಕಸಭೆ, ಮೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಮುಖಭಂಗ ಉಂಟಾಯಿತು. ಇದಕ್ಕೆ ಪ್ರಮುಖ ಕಾರಣ ಆಂತರಿಕ ಬೇಗುದಿ, ಅಸಮಾಧಾನ, ಜಿಲ್ಲಾ ನಾಯಕತ್ವದ ಕೊರತೆ. ಇಷ್ಟಾದರೂ ಎಚ್ಚೆತ್ತುಕೊಳದ ಪರಿಣಾಮ 2023ರ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯಲ್ಲಿ ಮತ್ತೊಮ್ಮೆ ಹೀನಾಯ ಸೋಲು ಕಾಣುವಂತಾಯಿತು. ಏಳು ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಸೀಮಿತವಾಯಿತು. ಇದು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆತಂಕ ತಂದೊಡ್ಡಿತ್ತು.
ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ಅವರನ್ನೇ ಮಂಡ್ಯದಿಂದ ಕಣಕ್ಕಿಳಿಸುವ ನಿರ್ಧಾರ ಮಾಡಲಾಯಿತು. ಅದಕ್ಕೆ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್‌ಗೌಡ ಮುನ್ನುಡಿ ಬರೆದರು. ಈ ಇಬ್ಬರು ನಿರಂತರವಾಗಿ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಎಚ್‌ಡಿಕೆ ಸ್ಪರ್ಧೆ ಮಾಡುವುದಕ್ಕೆ ಒಪ್ಪಿಗೆ ಅನಿವಾರ್ಯವಾಗಿ ಸೂಚಿಸಿದರು. ನಿರೀಕ್ಷೆಯಂತೆ ಅಭೂತಪೂರ್ವ ಗೆಲುವನ್ನು ಕಂಡು ಕೇಂದ್ರದಲ್ಲಿ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಜೆಡಿಎಸ್‌ನಲ್ಲಿ ಆಂತರಿಕ ಸಮಸ್ಯೆ ಬಗೆಹರಿದಿಲ್ಲ. ಅದರಂತೆ ಅಭಿನಂದನಾ ಸಮಾರಂಭಕ್ಕೆ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್‌ಗೌಡ ಭಾಗಿಯಾಗಿಲ್ಲ.
ಇನ್ನು ಗೈರಾದ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಮಾಜಿ ಶಾಸಕರ ಗೈರಿಗೆ ಕಾರಣ ಹುಡುಕಲೊರಟಾಗ ಒಂದಷ್ಟು ಮಾತುಗಳು ಕೇಳಿಬಂದವು. ಅದೆಂದರೆ ಕೇಂದ್ರ ಸಚಿವರ ಎಚ್‌ಡಿಕೆ ಅವರಿಗೆ ಅಭಿನಂದನಾ ಸಮಾರಂಭದ ಸ್ಥಳ ನಿಗದಿ ವಿಚಾರ. ಎಚ್‌ಡಿಕೆ ಅವರಿಗೆ ಜಿಲ್ಲಾಕೇಂದ್ರದಲ್ಲಿ ಬೃಹತ್ ಅಭಿನಂದನಾ ಸಮಾರಂಭವನ್ನು ಆಯೋಜಿಸಲು ಪೂರ್ವಸಿದ್ಧತೆ ನಡೆದಿತ್ತು. ಇದಕ್ಕೆ ಯೋಜನೆ ರೂಪುಗೊಂಡಿತ್ತು. ಆದರೆ ಏಕಾಏಕಿ ಪಾಂಡವಪುರಕ್ಕೆ ಅಭಿನಂದನಾ ಸಮಾರಂಭ ವರ್ಗಾವಣೆಯಾಗಿದೆ ಎನ್ನಲಾಗುತ್ತಿದೆ. ಇದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಬಾರದೆನ್ನುವ ಉದ್ದೇಶದಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಅಭಿನಂದನಾ ಸಮಾರಂಭ ಆಯೋಜನೆ ಮಾಡಲು ಅಂತಿಮವಾಗಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸಿಎಸ್‌ಪಿ ವರ್ಸಸ್ ಮಾಜಿ ಶಾಸಕರು
2018ರ ವಿಧಾನಸಭಾ ಚುನಾವಣೆ ಬಳಿಕ ಸಿ.ಎಸ್.ಪುಟ್ಟರಾಜು ಜತೆ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್‌ಗೌಡ ನಡುವಿನ ಹೊಂದಾಣಿಕೆ ಸರಿಯಿಲ್ಲ ಎನ್ನುವುದು ಬಹಿರಂಗ ಸತ್ಯ. ಈ ವಿಚಾರಕ್ಕೆ ಸಂಬಂಧಿಸಿದಂತೆ ವರಿಷ್ಠರ ಎದುರೇ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಮಾತ್ರವಲ್ಲದೆ ಕೆಲವೊಮ್ಮೆ ಪತ್ರಿಕಾಗೋಷ್ಠಿಗಳನ್ನು ನಡೆಸುವಾಗ ಪುಟ್ಟರಾಜು ಜತೆ ಇಬ್ಬರು ಮಾಜಿ ಶಾಸಕರು ವೇದಿಕೆ ಹಂಚಿಕೊಳ್ಳದ ಸಾಕಷ್ಟು ಉದಾಹರಣೆಯೂ ಇವೆ.
ಪ್ರಮುಖವಾಗಿ ಸಿ.ಎಸ್.ಪುಟ್ಟರಾಜು ಮತ್ತು ರವೀಂದ್ರ ಶ್ರೀಕಂಠಯ್ಯ ನಡುವೆ ಶೀತಲ ಸಮರ ನಡೆದುಕೊಂಡೇ ಬರುತ್ತಿದೆ. ಸಿಎಸ್‌ಪಿ ಅವರ ಕೆಲ ನಡೆ ಬಗ್ಗೆ ಅಸಮಾಧಾನವಿತ್ತೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇರ ಮಾತಿಗೆ ಹೆಸರಾದ ರವೀಂದ್ರ ಶ್ರೀಕಂಠಯ್ಯ ವರಿಷ್ಠರ ಎದುರೇ ಎಲ್ಲ ಮಾಹಿತಿಯನ್ನು ಬಿಚ್ಚಿಟ್ಟಿದ್ದರು ಎನ್ನುವ ಮಾಹಿತಿ ಇದೆ. ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್‌ಗೌಡ ಭಾಗವಹಿಸಿದ್ದು ವಿರಳ.
ಈ ನಡುವೆ ಎದುರಾಗಿದ್ದೆ ಲೋಕಸಭಾ ಚುನಾವಣೆ. ಪ್ರಾರಂಭದಿಂದಲೂ ಜೆಡಿಎಸ್ ಅಭ್ಯರ್ಥಿ ಯಾರೆನ್ನುವ ಚರ್ಚೆ ನಡೆಯುತ್ತಲೇ ಇತ್ತು. ಅದರಂತೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ಕೂಡ ಲೋಕಸಭಾ ಚುನಾವಣೆಯ ರೇಸ್‌ನಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ವಿಚಾರದಲ್ಲಿ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್‌ಗೌಡ ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಚುನಾವಣೆಯಲ್ಲಿ ನಕಾರಾತ್ಮಕ ಫಲಿತಾಂಶ ಬರುವ ಸಾಧ್ಯತೆ ಇದೆ ಎನ್ನುವ ಮಾತನ್ನು ವರಿಷ್ಠರಿಗೆ ಹೇಳಿದ್ದರು. ಅತ್ತ ಬಿಜೆಪಿ ಹೈಕಮಾಂಡ್ ಕೂಡ ಎಚ್‌ಡಿಕೆ ಸ್ಪರ್ಧೆ ಮಾಡುವಂತೆ ಸೂಚನೆ ಕೊಟ್ಟಿತ್ತು. ಆದ್ದರಿಂದ ಅಂತಿಮವಾಗಿ ಎಚ್‌ಡಿಕೆ ಸ್ಪರ್ಧೆ ಅನಿವಾರ್ಯವಾಯಿತು.
ಜಿಲ್ಲೆಯ ನಾಯಕತ್ವ ಯಾರಿಗೆ?
ಜಿಲ್ಲೆಯಲ್ಲಿ ಜೆಡಿಎಸ್ ಮತ್ತೆ ಅಬ್ಬರಿಸಲು ಆರಂಭಿಸಿದೆ. ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್‌ನಲ್ಲಿಯೂ ಗೆಲುವು ಸಾಧಿಸಿ ಜಿಲ್ಲಾ ರಾಜಕೀಯದ ಮೇಲೆ ಹಿಡಿತ ಸಾಧಿಸಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ನಾಯಕತ್ವ ವಹಿಸಿಕೊಳ್ಳಲು ನಾಯಕರು ಆಸಕ್ತಿ ತೋರುತ್ತಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಎದುರಾಗಲಿದೆ. ಇದಕ್ಕೂ ಮುನ್ನ ಸ್ವ ಪಕ್ಷದ ನಾಯಕರ ಮುನಿಸನ್ನು ಬಗೆಹರಿಸುವ ಹೊಣೆಗಾರಿಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೇಲಿದೆ.