More

  ಸ್ಪಟಿಕದಂಥ ಜೀವಜಲ ವ್ಯರ್ಥ

  ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

  ಒತ್ತಿನೆಣೆ ಕೊಂಕಣ ರೈಲ್ವೇ ಸುರಂಗ ಮಾರ್ಗದಲ್ಲಿ ಜೀವಜಲ ಹರಿದು ವ್ಯರ್ಥವಾಗುತ್ತಿದ್ದರೂ ಬೈಂದೂರಲ್ಲಿ ಕುಡಿಯುವ ನೀರು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತದೆ. ನೀರಿನ ಬಗ್ಗೆ ನಮಗಿರುವ ಅನಾದರದ ವಾಸ್ತವ ಚಿತ್ರಣ ಇದು.

  ಜೀವಜಲ ವ್ಯರ್ಥ

  ಅಂಗೈಯಲ್ಲಿ ಪರಿಹಾರವಿದ್ದರೂ ಬೈಂದೂರಿನ ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಹೆಣಗಾಡುತ್ತಿರುವುದು ಅತ್ಯಂತ ಶೋಚನೀಯ. ಬೈಂದೂರು ಕುಡಿಯುವ ನೀರಿನ ಸಮಸ್ಯೆಗೆ ಸೌಪರ್ಣಿಕಾ ಏತಾ ನೀರಾವರಿ ಬಲ ದಂಡೆ ಯೋಜನೆ, ತೂದಳ್ಳಿ ಹೊಳೆಗೆ ಡ್ಯಾಮ್ ಮುಂತಾದ ಬಹುಕೋಟಿ ಯೋಜನಗಳ ಮೂಲಕ ಅಂಗೈಯಲ್ಲಿ ಆಕಾಶ ತೋರಿಸಿದ್ದು ಬಿಟ್ಟರೆ ಸುರಂಗದಿಂದ ಹರಿದು ಬರುವ ನೀರಿನ ಸದ್ಬಳಕೆ ಬಗ್ಗೆ ಯಾರೂ ಚಿಂತನೆ ಮಾಡದಿರುವುದು ದುರ್ದೈವೇ ಸರಿ.

  ಕಳೆದ ಎರಡು ದಶಕದಿಂದ ಒತ್ತಿನೆಣೆ ಸುರಂಗ ಮಾರ್ಗದಿಂದ ಶುದ್ಧವಾದ ತಂಪು ಹರಿದು ವ್ಯರ‌್ಥವಾಗುತ್ತಿದೆ. ಸುರಂಗ ದಾಟಿದ ನಂತರ ಈ ನೀರು ಮಲೀನವಾಗುತ್ತದೆ. ಕಡು ಬೇಸಿಗೆಯಲ್ಲೂ ನೀರಿನ ಒತ್ತಡ ಇರುತ್ತದೆ. ಕಿಲೋ ಮೀಟರ್ ಲೆಕ್ಕದಲ್ಲಿ ನೀರು ಹರಿದು ಪೋಲಾಗುತ್ತಿದೆ. ಇದೇ ನೀರು ಬಳಸಿಕೊಂಡರೆ ಬೈಂದೂರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು.

  Otthinene Tunnel
  ಒತ್ತಿನೆಣೆ ಕೊಂಕಣ ರೈಲ್ವೇ ಸುರಂಗ ಮಾರ್ಗ.

  ಒತ್ತಿನೆಣೆ ಬೆಟ್ಟದ ಬುಡದಿಂದ ಶಿರೂರು ಕಡೆ ಸುರಂಗ ಕೊರೆಯಲಾಗಿದೆ. ಬೆಟ್ಟದಲ್ಲಿ ಇಂಗಿದ ನೀರು ಸುರಂಗದಿಂದ ಒರತೆಯಾಗಿ ಹೊರ ಬರುತ್ತಿದ್ದು, ರುಚಿ ತಿಳಿಯಬೇಕಿದ್ದರೆ ಕುಡಿದು ನೋಡಬೇಕು. ನೀರು ಶುದ್ಧ ಸ್ಪಟಿಕ. ಯಾವ ಲ್ಯಾಬಿಗೆ ತೋರಿಸಿದರೂ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಒಟ್ಟಾರೆ ಇರುವ ಸಂಪನ್ಮೂಲ ಬಳಸಿಕೊಂಡು ಶಾಶ್ವತ ಪರಿಹಾರ ನೀಡಲು ಸಾಧ್ಯವಿದ್ದರೂ ಹಿತ್ತಲು ಗಿಡ ಮದ್ದಲ್ಲ.

  ಹಕ್ಲಾಡಿ ಮಾದರಿ

  ವ್ಯರ್ಥವಾಗುತ್ತಿರುವ ನೀರು ಸದ್ಬಳಕೆ ಮಾಡಿ ಹಕ್ಲಾಡಿ ಗ್ರಾಮ ಪಂಚಾಯಿತಿ ಮಾದರಿಯಾಗಿದೆ. ಹಕ್ಲಾಡಿ ಗ್ರಾಮ ಬಗ್ವಾಡಿಯಲ್ಲಿ ಇರುವ ನಿರುಪಯುಕ್ತ ಕಲ್ಲು ಕ್ವಾರಿಯಲ್ಲಿ ಸಾಕಷ್ಟು ನೀರಿತ್ತು. ಈ ನೀರಿನ ಬಗ್ಗೆ ವಿಜಯವಾಣಿ ಸರದಿ ವರದಿ ಪ್ರಮಟಿಸಿದ ಬಳಿಕ ಎಚ್ಚೆತ್ತ ಹಕ್ಲಾಡಿ ಗ್ರಾಪಂ ಕಲ್ಲು ಕೋರೆ ನೀರು ಕುಡಿಯಲು ಯೋಗ್ಯವೇ ಎಂದು ತಿಳಿಯಲು ಪರೀಕ್ಷೆಗಾಗಿ ಮೈಸೂರು ಲ್ಯಾಬಿಗೆ ಕಳುಹಿಸಿತು. ಲ್ಯಾಬ್ ಯೋಗ್ಯ ಎಂದು ಗ್ರೀನ್ ಸಿಗ್ನಲ್ ನೀಡಿ ಬಳಿಕ ಹಕ್ಲಾಡಿ ಗ್ರಾಪಂ ಬಟ್ಟೆಕುದ್ರು, ಯಳೂರು ತೊಪ್ಲು ಪ್ರದೇಶಕ್ಕೆ ಇದೇ ಕಲ್ಲು ಕ್ವಾರಿ ನೀರು ಪೂರೈಕೆ ಮಾಡುತ್ತಿದೆ. ಇನ್ನೆರಡು ಕ್ವಾರಿಯಲ್ಲಿ ಸಾಕಷ್ಟು ನೀರಿದ್ದು, ಅದನ್ನೂ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

  ಹೀಗೆ ಮಾಡಬಹುದು

  ಒತ್ತಿನೆಣೆ ಸುರಂಗ ಮಾರ್ಗದಿಂದ ಹರಿದು ಬರುವ ನೀರು ಒಗೆಯುವುದು, ಇನ್ನಿತರ ತ್ಯಾಜಗಳ ಮೂಲಕ ಕುಲಷಿತವಾಗುತ್ತಿದೆ. ಸುರಂಗದದಿಂದ ಹೊರ ಬರುವ ನೀರನ್ನು ಡೈವರ್ಷನ್ ಮಾಡಿ ಓಪನ್ ವೆಲ್‌ಗೆ ಹರಿಸಬೇಕು. ಅಲ್ಲೇ ದೊಡ್ಡದೊಂದು ನೀರಿನ ಟ್ಯಾಂಕ್ ಇದ್ದು, ಬಾವಿಯಿಂದ ನೀರು ಶುದ್ಧೀಕರಿಸಿ ಈ ಟ್ಯಾಂಕಿಗೆ ಹಾಯಿಸಬೇಕು. ಬೇಕಿದ್ದರೆ ಬೈಂದೂರು, ಯಡ್ತರೆ, ಪಡುವರಿ ಗ್ರಾಮಗಳಿಗೆ ನೀರು ಪೂರೈಸುವಷ್ಟು ದೊಡ್ಡ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರು ಪೂರೈಸಲು ಸಾಧ್ಯ. ಮಳೆಗಾಲದಲ್ಲಿ ನೀರಿನ ಅಬ್ಬರ ಹೆಚ್ಚಿದ್ದು, ಕಡುಬೇಸಿಗೆಯಲ್ಲಿ ನೀರಿನ ಒರತೆ ಸ್ವಲ್ಪ ಮಟ್ಟಿಗೆ ಕಮ್ಮಿಯಾದರೂ ನೀರು ಹರಿಯುವುದು ನಿಲ್ಲುವುದಿಲ್ಲ.

  ಪೋಲಾಗುತ್ತಿರುವ ನೀರು ಸದ್ಭಳಕೆ ಮಾಡಿಕೊಳ್ಳುವ ಬಗ್ಗೆ ಹಲವು ಬಾರಿ ಮಾತುಗಳು ಕೇಳಿ ಬಂದಿದ್ದವು. ಆದರೆ ಈವರೆಗೂ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ನಮ್ಮ ಜನಪ್ರತಿನಿಧಿಗಳು ಟ್ಯಾಂಕರ್ ನೀರು ಪೂರೈಕೆ ಮಾಡುವ ಬಗ್ಗೆ ಮಾತ್ರವೇ ಗಮನ ಹರಿಸುತ್ತಿದ್ದಾರೆ. ಆದರೆ ನೀರಿನ ಮೂಲ ಸಂರಕ್ಷಿಸಲು ವಿಫಲರಾಗುತ್ತಿದ್ದಾರೆ. ನಮ್ಮ ಸಂಸ್ಥೆಯಿಂದಲೂ ಹಾಳಾಗುತ್ತಿರುವ ನೀರು, ಸಂರಕ್ಷಿಸುವ ಬಗ್ಗೆ ಮನವಿ ಮಾಡುತ್ತೇವೆ.
  -ಗಣೇಶ್ ಕಾರಂತ್, ರಂಗ ಕಲಾವಿದ ಬೈಂದೂರು

  ಸುರಂಗದಿಂದ ಹರಿದು ಬರುವ ಜೀವಜಲ ಹರಿಯಲು ತೋಡು ಮಾಡಿ, ಮುಖ್ಯ ತೋಡಿಗೆ ಹೋಗುವಂತೆ ಮಾಡಿದ್ದಾರೆ. ತೋಡಿನ ಮೂಲಕ ಹರಿದು ಬರುವ ನೀರಿಗೆ ಗಂಗಾನಾಡು ರೋಡ್ ಬಳಿ ಪ್ರತಿವರ್ಷ ಕಟ್ಟೆ ಹಾಕಲಾಗುತ್ತಿದೆ. ಅಲ್ಲಿ ಕಿಂಡಿ ಅಣೆಕಟ್ಟು ಮಾಡಿದರೆ ಬೈಂದೂರು ನಗರಕ್ಕೆ ಅಗತ್ಯವಿರುವ ನೀರು ಸಿಗಲಿದೆ. ಈಗ ಕೆಲವೇ ಮನೆಗಳು ಮಾತ್ರವೇ ನೀರನ್ನು ಬಳಸಿಕೊಳ್ಳುತ್ತಿವೆ. ರೈಲ್ವೆ ಜಾಗದಲ್ಲಿರುವ ತೋಡಿನಿಂದ ಕೆಲವರು ನೀರನ್ನು ತಿರುಗಿಸಿಕೊಂಡಿದ್ದಾರೆ. ಅದನ್ನೇ ವ್ಯವಸ್ಥಿತವಾಗಿ ಗ್ರಾಮ ಪಂಚಾಯಿತಿ ಬಳಸಿಕೊಂಡರೆ ಸಮೃದ್ಧ ನೀರು ದೊರೆಯಲಿದೆ.
  -ವೆಂಕಟೇಶ ಕಿಣಿ, ಮೂಕಾಂಬಿಕಾ ರೈಲ್ವೆ ಯಾತ್ರಿಕರ ಸಂಘ ಬೈಂದೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts