More

    ಮರವಂತೆಯಲ್ಲಿ ನೀರಿಗೆ ತತ್ವಾರ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ವಿಶ್ವ ಪ್ರಸಿದ್ಧ ಕಡಲ ಕಿನಾರೆ, ಮೀನುಗಾರಿಕಾ ಬಂದರು, ಕೃಷಿ ಹಾಗೂ ಮೀನುಗಾರಿಕೆಯನ್ನು ನೆಚ್ಚಿಕೊಂಡಿರುವ, ನಿರಂತರ 3 ಬಾರಿ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಪಾತ್ರವಾದ ಗ್ರಾಮ ಮರವಂತೆ. ಇದೀಗ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿ, ಜನರು ಟ್ಯಾಂಕರ್ ನೀರು ಅವಲಂಬಿಸಿರುವುದು ಸೋಜಿಗದ ಸಂಗತಿ.

    ನೀರಿಗೆ ತತ್ವಾರ

    ಕಳೆದ 2-3 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸದ ಮರವಂತೆ ಈ ಬಾರಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಸಮಸ್ಯೆ ಎದುರಿಸುತ್ತಿದೆ. ಗ್ರಾಮದ ಹಲವು ಕಡೆಗಳಿಗೆ ಸಾಕಷ್ಟು ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಹೆಣಗಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಂದೆಡೆ ಅರಬ್ಬಿ ಸಮುದ್ರ, ಇನ್ನೊಂದೆಡೆ ಸೌಪರ್ಣಿಕಾ ನದಿ. ಇವೆರಡರ ಮಧ್ಯಭಾಗದಲ್ಲಿರುವ ಮರವಂತೆ ಉಪ್ಪು ನೀರಿನ ಸಮಸ್ಯೆಯನ್ನೂ ಎದುರಿಸುತ್ತಿದೆ. ಗ್ರಾಮದ ಹಲವೆಡೆ ಬಾವಿಗಳಲ್ಲಿ ಉಪ್ಪು ನೀರು ಇದ್ದು, ಈ ಬಾವಿ ನೀರು ಉಪಯೋಗಕ್ಕೆ ಬರುತ್ತಿಲ್ಲ. ಗ್ರಾಮ ಪಂಚಾಯಿತಿಯ ಬಾವಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೆ, ಬೋರ್‌ವೆಲ್‌ಗಳಲ್ಲಿ ಕೂಡ ನೀರಿನ ಲಭ್ಯತೆ ಇಳಿಕೆಯಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಲಕ್ಷಾಮ ಇನ್ನಷ್ಟು ಉಲ್ಬಣವಾಗಲಿದೆ.

    Maravanthe Water Problem

    ಅನುದಾನ ಹೊಂದಾಣಿಕೆ ಚಿಂತೆ

    ಮರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ತೆರೆದ ಬಾವಿಗಳು ಮತ್ತು 4 ಬೋರ್‌ವೆಲ್‌ಗಳಿದ್ದು, ಗ್ರಾಮದ ಸುಮಾರು 120 ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ಇದೀಗ ಪ್ರತಿನಿತ್ಯ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ. ಬಾವಿಯಲ್ಲಿ ಮತ್ತು ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಎರಡು ದಿನಗಳಿಗೊಮ್ಮೆ ನೀರಿನ ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಕೆಲವು ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವುದು ಹೇಗೆ ಮತ್ತು ಟ್ಯಾಂಕರ್ ನೀರು ಸರಬರಾಜು ಮಾಡಲು ಅನುದಾನ ಹೊಂದಾಣಿಕೆ ಮಾಡುವುದು ಹೇಗೆ ಎಂಬ ಚಿಂತೆ ಗ್ರಾಮ ಪಂಚಾಯಿತಿಯನ್ನು ಕಾಡುತ್ತಿದೆ.

    ಬಾವಿಗಳಲ್ಲಿ ಮತ್ತು ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
    -ಶೋಭಾ ಎಸ್., ಪಿಡಿಒ (ಪ್ರಭಾರ), ಗ್ರಾಮ ಪಂಚಾಯಿತಿ ಮರವಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts