More

    ಕಿಂಡಿ ಅಣೆಕಟ್ಟೆಗಳು ವಿಫಲ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಜಿಲ್ಲೆಯಲ್ಲಿ ಹತ್ತು ನದಿಗಳು ಘಟ್ಟದಿಂದ ಇಳಿದು ಅರಬ್ಬಿ ಸಮುದ್ರ ಸೇರುತ್ತಿವೆ. ಇದರೊಟ್ಟಿಗೆ ಲೆಕ್ಕವಿಲ್ಲದಷ್ಟು ಹಳ್ಳಕೊಳ್ಳಗಳೂ ಸೇರುತ್ತವೆ. ಮಾರಿಗೊಂದರಂತೆ ಕಿಂಡಿ ಅಣೆಕಟ್ಟೆ ಕಟ್ಟಲಾಗಿದೆ. ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಅಂರ್ತಜಲಮಟ್ಟ ತುಂಬಿ ತುಳುಕಿ, ಜಲಸಂಪತ್ತು ನಳನಳಿಸಬೇಕಿದ್ದರೂ ಈಗ ಕುಡಿಯುವ ನೀರಿಗೂ ತತ್ವಾರ.

    ಅಯ್ಯೋ ಇದೆಂತ ಸೆಖೆ ಮಾರ‌್ರೆ ಹೊರಗೆ ಬಂದರೆ ಉಮಿ ಒಳಗಿನ ಬೆಂಕಿ ಹಾಂಗೆ ಆತ್ತು. ಬಾವಿ ನೀರು ಬತ್ತಿಹೋತೀತ್ತು. ತೋಟಕ್ಕೆ ನೀರ್ ಬಿಡೂದು ಹೋಯ್ಲಿ ಕುಡೂಕು ನೀರು ಸಿಕ್ತಿಲ್ಲೆ. ಅಡಕೆ ತಂಗು ನೀರ್ ಇಲ್ಲೆ. ಗಂಟಿಗಳಿಗೆ ಎಲ್ಲಿಂದ ನೀರ್ ತಪ್ಪೂದು ಎಂದು ಜನ ಗೋಳಾಡುತ್ತಿದ್ದಾರೆ. ಯಾಕೆ ಸೆಖೆ ಆತ್ತು. ನೀರ್ ಎಂತಕೆ ಬತ್ತಿಹೋತಿತ್ತು ಒಮ್ಮೆ ಯೋಚಿದ್ದರೆ ಇಂತಾ ಪರಿಸ್ಥಿತಿ ಜಿಲ್ಲೆಗೆ ಬರುತ್ತಿರಲಿಲ್ಲ.

    350 ಕಿಂಡಿ ಅಣೆಕಟ್ಟೆ

    ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟಿಗಾಗಿ ಸುಮಾರು 400 ಕೋಟಿ ರೂ. ಖರ್ಚಾಗಿದ್ದು, ಸಣ್ಣದು ದೊಡ್ಡದು ಸೇರಿ 350 ಕಿಂಡಿಅಣೆಕಟ್ಟೆಯಿದೆ. ಕಳೆದ ಒಂದು ದಶಕದಿಂದ ಕಿಂಡಿಅಣೆಕಟ್ಟೆ ನಿರ್ಮಾಣವಾಗುತ್ತಿದ್ದರೂ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಏರಿಲ್ಲ ಎಂದರೆ ಕಿಂಡಿಅಣೆಕಟ್ಟೆ ವಿಫಲ ಎಂದು ಅರ್ಥ ಅಲ್ವಾ? ಪ್ರತಿವರ್ಷ ಅಣೆಕಟ್ಟೆ ನಿರ್ವಹಣೆಗೆ ದೊಡ್ಡದಾದರೆ ತಲಾ 5 ಲಕ್ಷ ಸಣ್ಣಪುಟ್ಟವುಗಳಿಗೆ ತಲಾ 2 ಲಕ್ಷ ಸುರಿಯಲಾಗುತ್ತಿದ್ದರೂ ಅಂತರ್ಜಲಮಟ್ಟ ವೃದ್ಧಿಸಿಲ್ಲ ಅಂದರೆ ಅನುದಾನ ವೇಸ್ಟ್ ಅಲ್ವಾ? ಕಿಂಡಿ ಅಣೆಕಟ್ಟೆಗಳು ನೀರಿನ ಪಾತ್ರೆ ತುಂಬದಿದ್ದರೂ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ಗುತ್ತಿಗೆದಾರರ ಕಿಸೆ ತುಂಬುತ್ತಿದೆ.

    ವಿವೇಚನೆಯಿಲ್ಲದ ಬಳಕೆ

    ನೀರಿನ ವಿವೇಚನಾ ರಹಿತ ಬಳಕೆ ಇವತ್ತು ನಮ್ಮ ಊರನ್ನು ಮರಳುಗಾಡು ಮಾಡಿದೆ. ನೀರು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಒಮ್ಮೆಯೂ ಯೋಚಿಸದೆ, ಉಚಿತ ವಿದ್ಯುತ್ ಸಿಕ್ಕ ಮೇಲಂತೂ ಅಧಿಕ ಶಕ್ತಿಯ ಯಂತ್ರಗಳನ್ನು ಬಳಸಿ, ಹೊಳೆ ನೀರು ಮೊಗೆ ಮೊಗೆದು ಖಾಲಿ ಮಾಡಿ, ನೀರಿನ ಮೂಲಕ್ಕೆ ಕೊಳ್ಳಿಯಿಡುತ್ತಿದ್ದೇವೆ ಎನ್ನುವ ಸಣ್ಣ ಜ್ಞಾನವೂ ಇಲ್ಲದ ಫಲ ಅನುಭವಿಸುತ್ತಿದ್ದೇವೆ. ಅಯ್ಯೋ ಸೆಖೆ ತಡೆಯೋದಕ್ಕೆ ಆಗೋದಿಲ್ಲ, ಕುಡಿಯುವುದಕ್ಕೆ ನೀರಿಲ್ಲ ಎನ್ನುವ ಸ್ಥಿತಿ ನಾವೇ ಸೃಷ್ಟಿಸಿಕೊಂಡಿದ್ದಲ್ಲವಾ?

    ಪ್ರಮುಖ ಅಂಶ

    ಬೆಟ್ಟಗುಡ್ಡಗಳು ನೀರಿನ ಅಕ್ಷಯ ಪಾತ್ರೆ ಎನ್ನುವುದಕ್ಕೆ ಒತ್ತಿನೆಣೆ ಸುರಂಗ ರೈಲು ಮಾರ್ಗ ಪ್ರತ್ಯಕ್ಷ ಸಾಕ್ಷಿ. ಕೊಂಕಣ ರೈಲು ಒಮ್ಮೆ ಸುರಂಗ ಮಾರ್ಗ ಪ್ರವೇಶಿಸಿ ಹೊರ ಬರುವಾಗ ಸಿಗುವ ಅನುಭವವೇ ಬೇರೆ. ಇಡೀ ಸುರಂಗ ಮಾರ್ಗಕ್ಕೆ ಯಾರೂ ಎಸಿ ಫಿಟ್ ಮಾಡಿಲ್ಲ ಅದರೂ ತಣ್ಣಗಿನ ಅನುಭವ ಕೊಡುತ್ತದೆ. ಸುರಂಗ ಕೊರೆದ ಬಳಿಕ ಇವತ್ತಿನ ತನಕ ಸ್ಪಟಿಕದಂಥ ನೀರು ಹರಿದು ವೇಸ್ಟ್ ಆಗುತ್ತಿದೆ. ನೀರಿನ ಹರಿವು ಬೇಸಿಗೆಯಲ್ಲಿ ಕಡಿಮೆ ಆಗುತ್ತದೆಯೇ ಹೊರತು ಬತ್ತುವುದಿಲ್ಲ. ಇದಕ್ಕೆ ಹೇಳುವುದು ಬೆಟ್ಟಗುಡ್ಡಗಳು ನೀರಿನ ಅಕ್ಷಯ ಪಾತ್ರೆ ಅಂತ. ಕೃಷಿಕರೊಬ್ಬರಿಗೆ ಪದ್ಮಶ್ರೀ ಸಿಕ್ಕಿದ್ದು ಬೆಟ್ಟ ಕೊರೆದು ನೀರು ತಂದ ಭಗೀರಥ ಸಾಹಸಕ್ಕೆ. ಬೈಂದೂರು ರೈಲ್ವೆ ಟ್ರಾಕ್ ಮೂಲಕ ಹರಿದು ವೇಸ್ಟ್ ಆಗುವ ನೀರು ಬಳಸಿಕೊಳ್ಳುವ ಯೋಚನೆ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಬಂದಿಲ್ಲ ಅಂದರೆ ಅದಕ್ಕಿಂತ ದೊಟ್ಟ ದೌರ್ಭಾಗ್ಯ ಮತ್ತೊಂದಿಲ್ಲ.

    ಕಳೆದ ಮೂರು ವರ್ಷ ಬಿದ್ದ ಮಳೆ

    2020-5,364, 2021-4,110, 2022-3,879. ಅಂತರ್ಜಲಮಟ್ಟ 2020_6.12, 2021_5.86, 2022_6.35, ಜಿಲ್ಲೆಯ ಅಂತರ್ಜಲಮಟ್ಟ ವಾರ್ಷಿಕ ವ್ಯತ್ಯಾಸ 2022_7.98, 2023_ 9.07 ಕುಂದಾಪುರ 2022_6.72ಮೀ. 2023, 7.07ಮೀ, ಬೈಂದೂರು 2022_7.97, 2023_8.40

    ಪಾತ್ರೆಯ ಬಾಯಿಗೆ ನೀರು ಸುರಿದಾಗ ಮಾತ್ರ ಬುಡದಿಂದ ನೀರು ಶೇಖರಣೆಯಾಗಿ ಮೇಲೆ ಬರುತ್ತದೆ. ಹಾಗೆಯೇ ಮಳೆ ನೀರು ಬೆಟ್ಟಗುಡ್ಡಗಳ ಮೇಲೆ ಬಿದ್ದು, ಅಲ್ಲಿ ಶೇಖರಣೆಯಾಗುವ ನೀರು ಬಾವಿ ಕೆರೆಗಳ ತುಂಬುತ್ತದೆಯೇ ಹೊರತು ಪಾತ್ರೆ ಬುಡದಂತಿರುವ ಕಿಂಡೆ ಅಣೆಕಟ್ಟೆಗಳಿಂದಲ್ಲ. ಒಂದು ಕಡೆ ಕಿಂಡಿಅಣೆಕಟ್ಟೆಯಿಂದ ಸಮೃದ್ಧ ನೀರು ಎಂದು ಜನರನ್ನು ನಂಬಿಸಿ, ಬೆಟ್ಟಗುಡ್ಡಗಳನ್ನು ಯಾರ‌್ಯಾರದ್ದೋ ಹೆಸರಿಗೆ ಮಾಡುವ ಮೂಲಕ ನೀರಾಶ್ರಿತ ತಾಣಗಳನ್ನು ಬರಿದು ಮಾಡಲಾಗುತ್ತಿದ್ದು, ಮುಂದಿನ ಪರಿಸ್ಥಿತಿ ನೆನೆಸಿಕೊಂಡರೆ ಭಯವಾಗುತ್ತದೆ. ಪ್ರಕೃತಿ ಸೃಷ್ಟಿ ನಮಗಾಗಿ ಮಾತ್ರ ಅಲ್ಲ ಸಕಲ ಜೀವ ಸಂಕುಲಕ್ಕಾಗಿ.
    -ರಾಘವೇಂದ್ರ ಭಟ್, ಕೃಷಿಕ ಭಟ್ರತೋಟ, ನಾಡಾ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts