More

    ಔಟ್‌ಡೋರ್ ಬಂದರು ಅರ್ಧಕ್ಕೆ ಸ್ಥಗಿತ, ಚುನಾವಣಾ ಬಹಿಷ್ಕಾರ ಸಾಧ್ಯತೆ

    ಗಂಗೊಳ್ಳಿ: ಕೇರಳ ಮಾದರಿಯಲ್ಲಿ ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಔಟ್‌ಡೋರ್ ಬಂದರು ಕಾಮಗಾರಿ ಸ್ಥಗಿತಗೊಂಡಿದ್ದು, ಅಪೂರ್ಣ ಕಾಮಗಾರಿಯಿಂದ ಸ್ಥಳೀಯ ಮೀನುಗಾರರಿಗೆ ತೊಂದರೆಯಾಗಿದೆ. ಹೀಗಾಗಿ ಮೀನುಗಾರರಿಂದ ಈ ವಿಧಾನಸಭಾ ಚುನಾವಣೆ ಬಹಿಷ್ಕಾರ ಸಾಧ್ಯತೆ ಸ್ಪಷ್ಟವಾಗಿದೆ.

    2011ರಲ್ಲಿ ಮರವಂತೆ ಔಟ್‌ಡೋರ್ ಬಂದರು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. 45 ಕೋಟಿ ರೂ. ಟೆಂಡರ್ ಆಗಿದ್ದು 2013ರಲ್ಲಿ ಕಾಮಗಾರಿ ಆರಂಭಿಸಲಾಗಿದೆ. 2016 ರಾಮಗಾರಿ ಮುಗಿಸಲು ಅಂತಿಮ ಗಡುವು ಆಗಿತ್ತು. ದಕ್ಷಿಣದಲ್ಲಿ 525 ಮೀ. ಉದ್ದದ ಬ್ರೇಕ್ ವಾಟರ್ ಮುಗಿದಿದ್ದು, 35 ಮೀ. ಉದ್ದ ಇನ್ನೂ ಬಾಕಿಯಿದೆ. ಈ ಹಂತದಲ್ಲೇ ಕಾಮಗಾರಿ ನಿಂತಿದೆ.

    ಕಾಮಗಾರಿಯನ್ನು ಮೂಲ ವಿನ್ಯಾಸದಂತೆ ಮಾಡದೆ ನಿಲ್ಲಿಸಿದ ಪರಿಣಾಮ ಬಂದರಿನ ದಕ್ಷಿಣ ಭಾಗದಲ್ಲಿ ಮರಳು ಶೇಖರಣೆಯಾಗುತ್ತಿದೆ. ಇದರಿಂದ ದೋಣಿಗಳನ್ನು ಲಂಗರು ಹಾಕಲು ಸಮಸ್ಯೆ ಆಗುತ್ತಿದೆ. ಮಳೆಗಾಲದಲ್ಲಿ ಕಡಲ ಉಬ್ಬರ ಮತ್ತು ಬಿರುಗಾಳಿಗೆ ಸಿಲುಕಿ ಅಪೂರ್ಣವಾಗಿದ್ದ ತಡೆಗೋಡೆಗಳು ಕುಸಿದಿದೆ. ಅಲೆಗಳ ಅಬ್ಬರಕ್ಕೆ ಸಮೀಪದ ರಸ್ತೆ ಕೊಚ್ಚಿ ಹೋಗಿ ಮನೆಗಳು ಅಪಾಯದಂಚಿಗೆ ತಲುಪಿತ್ತು.

    85 ಕೋಟಿ ರೂ.

    ಒಂದನೇ ಹಂತದ ಕಾಮಗಾರಿಯಿಂದ ಪ್ರಯೋಜನವಾಗದ ಹಿನ್ನೆಲೆಯಲ್ಲಿ 2ನೇ ಹಂತದ ಕಾಮಗಾರಿ ನಡೆಸಿ ಔಟ್‌ಡೋರ್ ಬಂದರನ್ನು ಸಮರ್ಪಕವಾಗಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದರು. ಇದಕ್ಕೆ ಸಮ್ಮತಿಸಿದ ಸರ್ಕಾರ 85 ಕೋಟಿ ರೂ. ಬಿಡುಗಡೆಗೆ ಮಂಜೂರಾತಿ ನೀಡಿತು. 2020ರ ಎಪ್ರಿಲ್‌ನಲ್ಲಿ 85 ಕೋಟಿ ರೂ. ಕಾಮಗಾರಿಗೆ ಕಾರ್ಯಾದೇಶ ನೀಡಿತ್ತು. ಆದರೆ ಈವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ.

    ಸಿಆರ್‌ಜಡ್ ಸಮಸ್ಯೆಯಿಂದ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸಮೀಪದ ಬಂದರುಗಳ ಅಭಿವದ್ಧಿ ಕಾರ್ಯಗಳಿಗೆ ಯಾವುದೇ ಸಮಸ್ಯೆ ಆಗದಿರುವುದು ಸಹಜವಾಗಿ ಸ್ಥಳೀಯ ಮೀನುಗಾರರ ಸಂಶಯಕ್ಕೆ ಕಾರಣವಾಗಿದೆ.

    ಚುನಾವಣಾ ಬಹಿಷ್ಕಾರ

    ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ತಾಳ್ಮೆ ಕಳೆದುಕೊಂಡಿರುವ ಮೀನುಗಾರರು ಕಾಮಗಾರಿ ಪ್ರಾರಂಭಿಸುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೀಡಿದ ಮನವಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಸೂಕ್ತ ಪರಿಹಾರ ಮತ್ತು ಭರವಸೆ ದೊರಕದಿದ್ದಲ್ಲಿ ಬಹತ್ ಪ್ರತಿಭಟನೆ ನಡೆಸಿ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದು, ಈ ವಿಚಾರ ವಿವಿಧ ಪಕ್ಷಗಳಿಗೆ ವಸ್ತುವಾಗುವ ಸಾಧ್ಯತೆ ಇದೆ.

    ಮರವಂತೆ ಔಟ್‌ಡೋರ್ ಬಂದರು ನಿರ್ಮಾಣಕ್ಕಾಗಿ ಏಜೆನ್ಸಿ ಕೂಡ ನಿಗದಿ ಮಾಡಲಾಗಿದೆ. ಸಿಆರ್‌ಜಡ್ ಕ್ಲಿಯರೆನ್ಸ್ ಆಗದಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಸಿಆರ್‌ಜಡ್ ಕ್ಲಿಯರೆನ್ಸ್ ನೀಡುವ ಸಂಬಂಧ ಇಲಾಖೆ ಹಿರಿಯ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದು, ಆದಷ್ಟು ಶೀಘ್ರ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ.
    -ಉದಯಕುಮಾರ ಶೆಟ್ಟಿ, ಬಂದರು ಮತ್ತು ಮೀನುಗಾರಿಕೆ ಇಂಜಿನಿಯರ್

    ಮರವಂತೆ ಔಟ್‌ಡೋರ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸದೆ, ಅನ್ಯಾಯವೆಸಗಲಾಗಿದೆ. ಕಾಮಗಾರಿ ಅರ್ಧದಲ್ಲೇ ನಿಲುಗಡೆ ಆಗಿರುವುದರಿಂದ ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಾಕೃತಿಕ ವಿಕೋಪದಿಂದ ರಸ್ತೆ, ಮನೆ ಮೊದಲಾದವುಗಳು ಸಮುದ್ರ ಪಾಲಾಗುತ್ತಿವೆ. ಇದರಿಂದ ಮೀನುಗಾರರಿಗೆ ತೊಂದರೆಯಾಗಿದೆ.
    -ಶ್ರೀಧರ ಖಾರ್ವಿ, ಮೀನುಗಾರರು ಮರವಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts