More

    ಬರಡು ಭೂಮಿಯಲ್ಲಿ ಬಂಗಾರದ ಬೆಳೆ

    ಭೋಜ ಪೂಜಾರಿ ಎಂಬುವರು ಮೂರು ಎಕರೆ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

    ವಿಜಯವಾಣಿ ಸುದ್ದಿಜಾಲ ಕೋಟ
    ಸಾಲಿಗ್ರಾಮ ಹಾಗೂ ಕೋಟ ಗ್ರಾಪಂ ವ್ಯಾಪ್ತಿಯ ನಡುವಿನ ಪರಿಸರದಲ್ಲಿ ಕೃಷಿ, ಕಂಬಳ ಹೀಗೆ ನಾನಾ ರಂಗದಲ್ಲಿ ಗುರುತಿಸಿಕೊಂಡ ಗಿಳಿಯಾರಿನ ಭೋಜಣ್ಣ ಎಂದೆ ಜನಜನಿತರಾದ ಭೋಜ ಪೂಜಾರಿ ಕೃಷಿ ಕಾಯಕದಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಿ ಹೊಸ ತಲೆಮಾರಿಗೆ ಮಾದರಿಯಾಗಿದ್ದಾರೆ.

    ಬಂಗಾರದ ಬೆಳೆ

    ಮೂರು ಎಕರೆ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ. ಪ್ರತಿವರ್ಷ ಖಾತೆ ಬೆಳೆ ಮುಗಿದ ನಂತರ ಸೌತೆ, ಕುಂಬಳಕಾಯಿ, ಕಲ್ಲಂಗಡಿ ಹೀಗೆ ನಾನಾ ಬೆಳೆ ಬೆಳೆಯತ್ತಾರೆ. ಅದರಲ್ಲಿ ಈ ಬಾರಿ ಕುಂದಾಪುರ ಭಾಷೆಯ ಕೊಳ್ಕೆ ಭತ್ತದ ನಾಟಿ ಮೂಲಕ ಬೇಸಿಗೆಯಲ್ಲೂ ಭತ್ತದ ಕ್ರಾಂತಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಈ ಬಾರಿ ಕಾರ್ಕಳದ ಕಜೆ ಜಯ ತಳಿ ಆಯ್ಕೆ ಮಾಡಿ 120 ದಿನಗಳ ಭತ್ತದ ಬೇಸಾಯ ಮಾಡಿದ್ದಾರೆ.

    ಸಾವಯವ ಪದ್ಧತಿ

    ಸಾವಯವ ಗೊಬ್ಬರ ಬಳಸಿ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಇತ್ತೀಚೆಗಿನ ಕಲ್ಲಂಗಡಿ ಹಣ್ಣು, ಸೌತೆ ಇದೀಗ ಭತ್ತದ ತಳಿಗೆ ಸಾವಯವ ಪದಾರ್ಥ ಬಳಸಿದ್ದಾರೆ. ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಸಹಿತ ಈ ಮಣ್ಣಿನಲ್ಲಿ ಅಸಾಧ್ಯ ಎಂದು ಹೇಳಲಾಗಿದ್ದ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕಳೆದ ಜನವರಿಯಲ್ಲಿ ಬ್ಯಾಡಗಿ ಮೆಣಸಿನ ಗಿಡ ತಂದು ಮೂರು ಎಕರೆ ಪ್ರದೇಶದ ಹೊಲದಲ್ಲಿ ಉಳುಮೆ ಮಾಡಿದ್ದರು. ಆದರೆ ಮೆಣಸು ಫಸಲು ಕಾಣುವುದರೊಳಗೆ ಗಿಡಕ್ಕೆ ರೋಗ ತಗುಲಿ ಪೂರ್ಣ ನಷ್ಟ ಅನುಭವಿಸಿದ್ದಾರೆ, ಆದರೂ ಧೃತಿಗೆಡದ ಅವರು ನಂತರ ಕೊಳ್ಕೆ ಭತ್ತ ಬೆಳೆದು ಉತ್ತಮ ಫಸಲಿಗೆ ಮುನ್ನುಡಿ ಬರೆದಿದ್ದಾರೆ.

    ಕಂಬಳದ ಮೂಲಕ ಪ್ರಸಿದ್ಧಿ

    ಭೋಜ ಪೂಜಾರಿ ಕೃಷಿ ಕಾಯಕದ ನಡುವೆ ಕರಾವಳಿಯ ಸೊಗಡಿನ ಕಂಬಳವನ್ನು ಪ್ರೀತಿಸಿ ನಾಲ್ಕು ಕೋಣ ಕಟ್ಟಿಕೊಂಡು ಸಾಕಷ್ಟು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಹಿರಿಯರು ನೀಡಿದ ಕೃಷಿ ಪದ್ಧತಿ ಅನುಸರಿಸಲು ಮುಂದಾಗಿದ್ದೇನೆ. ಕೃಷಿ ಪ್ರತಿಯೋರ್ವನು ನಿರ್ವಹಿಸಬೇಕಾದ ಅಗತ್ಯ. ನಾನು ಕೂಡ ಹಿರಿಯರ ಸಲಹೆ ಪಡೆದು ಕೃಷಿ ಕಾಯಕದಲ್ಲಿ ನಿರತನಾಗಿದ್ದೇನೆ. ಹೊಸ ಆವಿಷ್ಕಾರದ ನಡುವೆ ಸಾವಯವ ಕೃಷಿ ಪದ್ಧತಿ ಅನುಸರಿಸಿ ಹೊಸ ತಲೆಮಾರಿಗೆ ಬಹುದೊಡ್ಡ ಕೊಡುಗೆ ನೀಡುವ ಮಹದಾಸೆ ನನ್ನದಾಗಿದೆ.
    -ಭೋಜ ಪೂಜಾರಿ ಕೃಷಿಕರು ಗಿಳಿಯಾರು ಕೋಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts