More

    ರೊಬಸ್ಟಾ ಕಾಫಿ, ಬೆಲೆ ದಾಖಲೆ ಏರಿಕೆ!

    | ನಿತ್ಯಾನಂದ ಶಿವಗಂಗೆ, ಚಿಕ್ಕಮಗಳೂರು

    ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಇಳುವರಿ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಕೊರತೆ ಆಗದಿರಲಿ ಎಂಬ ಕಾರಣಕ್ಕೆ ಉದ್ದಿಮೆದಾರರು ಕಾಫಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಇದೇ ಕಾರಣಕ್ಕೆ ರೊಬಸ್ಟಾ ಕಾಫಿ ಬೆಲೆ ಗಗನಕ್ಕೇರಿದೆ. ಆದರೆ, ರಾಜ್ಯದ ಕಾಫಿ ಬೆಳೆಗಾರರು ಫಸಲನ್ನು ಈಗಾಗಲೆ ಮಾರಾಟ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಸಿಗದ ಹಾಗೆ ಆಗಿದೆ.

    ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೊಬಸ್ಟಾ ಪಾರ್ಚ್ ಮೆಂಟ್ ಕಾಫಿ ದರ 50 ಕೆಜಿಗೆ 16 ಸಾವಿರ ರೂ. ಗಡಿ ದಾಟಿದೆ. 9 ಸಾವಿರ ರೂ. ಆಸುಪಾಸಿನಲ್ಲಿದ್ದ ದರ ಏಕಾಏಕಿ 7 ಸಾವಿರ ರೂ. ಹೆಚ್ಚಳವಾಗಿರುವುದು ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. ಕಾಫಿ ಬೆಲೆ ಈ ಮಟ್ಟಿಗೆ ಹೆಚ್ಚಳವಾಗಲು ಕಾರಣ ಹುಡುಕುತ್ತ ಹೋದರೆ ಅತಿ ಹೆಚ್ಚು ಕಾಫಿ ಬೆಳೆಯುವ ದೇಶಗಳಲ್ಲಿ ಕಾಫಿ ಇಳುವರಿ ಗಣನೀಯವಾಗಿ ತಗ್ಗಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಪ್ರಮುಖವಾಗಿ ಬ್ರೆಜಿಲ್, ವಿಯಟ್ನಾಂ, ಮೆಕ್ಸಿಕೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ವಿಯಟ್ನಾಂ ಹಾಗೂ ಮೆಕ್ಸಿಕೋದಲ್ಲಿ ಇಳುವರಿ ಗಣನೀಯ ತಗ್ಗಿದೆ. ಹೀಗಾಗಿ ಭಾರತದಲ್ಲಿ ಬೆಳೆಯುವ ರೊಬಸ್ಟಾಗೆ ಹೆಚ್ಚಿನ ಧಾರಣೆ ಬಂದಿದೆ.

    ವಿಯಟ್ನಾಂ ಹಾಗೂ ಮೆಕ್ಸಿಕೋದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇನ್ನೂ ಎರಡ್ಮೂರು ವರ್ಷ ಕಾಫಿ ಇಳುವರಿ ಹೆಚ್ಚು ಬರುವುದಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಉದ್ಯಮಿಗಳು ತಮ್ಮ ಉದ್ಯಮಕ್ಕೆ ಕಾಫಿ ಕೊರತೆ ಉಂಟಾಗದಿರಲೆಂಬ ಕಾರಣಕ್ಕೆ ಹೆಚ್ಚೆಚ್ಚು ಕಾಫಿ ಖರೀದಿಸಿ ಸಂಗ್ರಹಿಸುತ್ತಿದ್ದಾರೆ. ಈ ಕಾರಣದಿಂದಲೂ ರೊಬಸ್ಟಾ ಕಾಫಿ ಬೆಲೆ ಗಗನಕ್ಕೇರಿರುವ ಸಾಧ್ಯತೆ ಇದೆ.

    ಕರ್ನಾಟಕದ ಕಾಫಿ ಗುಣಮಟ್ಟ ಉತ್ತಮ

    ಭಾರತದಲ್ಲಿ ಬೆಳೆಯುವ ಕಾಫಿಯನ್ನು ಪ್ರಮುಖವಾಗಿ ಯುರೋಪ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬೆಳೆಯುವ ಕಾಫಿಯ ಗುಣಮಟ್ಟ ಅತ್ಯುತ್ತಮ. ಕಾಫಿಯ ಔಟನ್ ಸಹ ಅಧಿಕವಾಗಿ ಬರುತ್ತದೆ. 50 ಕೆಜಿ ಕಾಫಿ ಮೂಟೆಯನ್ನು ಬೇಳೆ ಮಾಡಿದಾಗ ಶೇ.25ರಿಂದ 30 ಬೇಳೆ ಬರುತ್ತದೆ. ಹೀಗಾಗಿಯೇ ಕರ್ನಾಟಕದಲ್ಲಿ ಬೆಳೆಯುವ ರೊಬಸ್ಟಾ ಕಾಫಿ ಬೆಲೆ ಹೆಚ್ಚಾಗಿದೆ. ಈ ಹಿಂದೆ ಕಾಫಿಯ ಬೇಳೆ ಎಷ್ಟು ಪ್ರಮಾಣ ಬರುತ್ತದೆ ಎಂದು ನೋಡುತ್ತಿರಲಿಲ್ಲ. ಈಗ ಬೇಳೆ ಪ್ರಮಾಣವನ್ನು ಲೆಕ್ಕ ಹಾಕುತ್ತಿರುವುದರಿಂದಾಗಿ ಕಾಫಿಗೆ ಹೆಚ್ಚು ಧಾರಣೆ ಸಿಗುತ್ತಿದೆ ಎನ್ನುತ್ತಾರೆ ಕಾಫಿ ಬೆಳೆಗಾರರು.

    ಮಧ್ಯವರ್ತಿಗಳಿಂದ ವಂಚನೆ

    ಕರ್ನಾಟಕದಲ್ಲಿ ಬೆಳೆಯುವ ಕಾಫಿಗೆ ನ್ಯೂಯಾರ್ಕ್ ಹಾಗೂ ಲಂಡನ್ ಮಾರುಕಟ್ಟೆಯಲ್ಲಿ ದರ ನಿಗದಿಯಾಗುತ್ತದೆ. ಅಲ್ಲಿನ ಮಾರುಕಟ್ಟೆಯ ಪ್ರಕಾರ 50 ಕೆಜಿ ರೊಬಸ್ಟಾ ಪಾರ್ಚ್​ವೆುಂಟ್ ಕಾಫಿ ದರ 215ರಿಂದ 220 ಸೆಂಟ್ಸ್ ಇದೆ. ಇದನ್ನು ಭಾರತೀಯ ರೂಪಾಯಿಯಲ್ಲಿ ಪರಿಗಣನೆಗೆ ತೆಗೆದುಕೊಂಡಾಗ ಕನಿಷ್ಠ 18 ಸಾವಿರ ರೂ. ಸಿಗಬೇಕು. ಆದರೆ ಮಧ್ಯವರ್ತಿಗಳು ಹಾಗೂ ರಫ್ತುದಾರರು ಬೆಳೆಗಾರರಿಗೆ ಇಷ್ಟು ಬೆಲೆಯನ್ನು ನೀಡದೆ ಈ ಹಿಂದಿನಿಂದಲೂ ವಂಚಿಸುತ್ತಲೇ ಇದ್ದಾರೆ ಎನ್ನುವುದು ಬೆಳೆಗಾರರ ಆರೋಪ. ರಷ್ಯಾ-ಉಕ್ರೇನ್ ಯುದ್ಧ, ಸಮುದ್ರದಲ್ಲಿ ಹಡುಗುಗಳ್ಳರ ಕಾರಣ ನೀಡಿ ರೈತರಿಗೆ ಕಡಿಮೆ ಬೆಲೆ ನೀಡುತ್ತಿದ್ದರು. ಈಗ ಕಾಫಿಗೆ ಭಾರಿ ಬೇಡಿಕೆ ಬಂದಿದ್ದರಿಂದ ದರ ಹೆಚ್ಚಳವಾಗಿದೆ.

    ಕೈಗೆ ಬಂದ ತುತ್ತು ಬಾಯಿಗಿಲ್ಲ

    ಫೆಬ್ರವರಿಯಲ್ಲಿ ಕಾಫಿ ಕೊಯ್ಲು ಆರಂಭವಾಗಿ ಏಪ್ರಿಲ್ ವೇಳೆಗಾಗಲೇ ಮುಕ್ತಾಯಗೊಳ್ಳುತ್ತದೆ. ಬೆಳೆಗಾರರು ಕಾಫಿ ಬೆಳೆಯನ್ನೇ ನಂಬಿಕೊಂಡು ಇತರ ವ್ಯವಹಾರಗಳನ್ನು ಮಾಡಿರುತ್ತಾರೆ. ಹೀಗಾಗಿ ಕಾಫಿ ಕೊಯ್ಲು ಕೈಗೆ ಬರುತ್ತಿದ್ದಂತೆ ಮಾರಾಟ ಮಾಡಿ ತಮ್ಮ ಹಣಕಾಸು ವ್ಯವಹಾರ ಪೂರ್ಣಗೊಳಿಸಿಕೊಳ್ಳುತ್ತಾರೆ. ಇದರಿಂದಾಗಿ ಏಪ್ರಿಲ್ ವೇಳೆಗಾಗಲೇ ಬಹುತೇಕ ಬೆಳೆಗಾರರ ಬಳಿ ಫಸಲೇ ಇಲ್ಲ. ಬೆಳೆಗಾರರು ಕಾಫಿ ಮಾರಾಟ ಮಾಡಿದ ಬಳಿಕ ಧಾರಣೆ ಏಕಾಏಕಿ ಏರಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ. ಕೇವಲ ಶೇ.30 ಬೆಳೆಗಾರರ ಬಳಿ ಕಾಫಿ ಇದೆಯಾದರೂ ಅವರು ಇನ್ನೂ ಹೆಚ್ಚಿನ ಧಾರಣೆ ಬರುವ ನಿರೀಕ್ಷೆಯಲ್ಲಿ ಕಾಫಿ ಮಾರಾಟಕ್ಕೆ ಮುಂದಾಗುತ್ತಿಲ್ಲ.

    ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರಕಾರ ನಾವು ಬೆಳೆಯುವ ಕಾಫಿಗೆ ಇನ್ನೂ ಹೆಚ್ಚಿನ ಧಾರಣೆ ಸಿಗಬೇಕು. ಆದರೆ ವಿವಿಧ ಕಾರಣಗಳನ್ನು ಹೇಳಿ ದರ ಹೆಚ್ಚು ನೀಡುತ್ತಿಲ್ಲ. ಅರೇಬಿಕಾ ಕಾಫಿಗೆ ರೊಬಸ್ಟಾ ಕಾಫಿ ಮಿಶ್ರಣ ಮಾಡಲೇಬೇಕು. ಆದರೆ ಈ ಬಾರಿ ಪ್ರಪಂಚದಲ್ಲಿ ರೊಬಸ್ಟಾ ಕಾಫಿ ಉತ್ಪಾದನೆ ಗಣನೀಯವಾಗಿ ತಗ್ಗಿರುವುದರಿಂದ ಧಾರಣೆ ಹೆಚ್ಚಾಗಿದೆ.

    | ಹೊಲದಗದ್ದೆ ಗಿರೀಶ್ ಕಾಫಿ ಬೆಳೆಗಾರ

    ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

    ಅವರ ಪ್ರೇಯಸಿಗಾಗಿ ನನ್ನ ಅವಕಾಶ ಕಿತ್ತುಕೊಂಡ್ರು! ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts