ಅಕ್ಕನ ಅರಿಶಿಣ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ ಯುವತಿ

up video
Published on

ಉತ್ತರ ಪ್ರದೇಶ: ವಯಸ್ಸಿನ ಭೇದವಿಲ್ಲದೆ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ಹೃದಯಾಘಾತವು ವಯಸ್ಸಾದವರಲ್ಲಿ ಹೆಚ್ಚು ಎಂದು ಹೇಳಲಾಗುತ್ತಿತ್ತು, ಆದರೆ ಈಗ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಯುವಜನರು ಸಹ ಹೃದಯಾಘಾತಕ್ಕೆ ಒಳಗಾಗುತ್ತಾರೆ.  ನೃತ್ಯ ಮಾಡುವಾಗ ಯುವತಿ ಕುಸಿದು ಬಿದ್ದು ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ಉತ್ತರ ಪ್ರದೇಶದಲ್ಲಿ ಮದುವೆಯೊಂದರಲ್ಲಿ ದುರಂತ ಸಂಭವಿಸಿದೆ. ಮೀರತ್ ಜಿಲ್ಲೆಯ ಯುವತಿಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಸಹೋದರಿಯ ಅರಿಶಿಣ ಶಾಸ್ತ್ರ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ರಿಮ್ಶಾ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ವೈದ್ಯರು ಇದನ್ನು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಡಿಜೆ ಹಾಡುಗಳಿಗೆ ಮಕ್ಕಳೊಂದಿಗೆ ಖುಷಿಯಿಂದ ಕುಣಿದಾಡುತ್ತಿದ್ದ ಯುವತಿ ಎಲ್ಲರೂ ನೋಡುವಷ್ಟರಲ್ಲಿ ಕೆಳಗೆ ಬಿದ್ದು ಪ್ರಜ್ಞಾಹೀನಳಾದಳು. ಕೂಡಲೇ ಕುಟುಂಬಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ಧಾವಿಸಿದ್ದಾರೆ. ಆಸ್ಪತ್ರೆಗೆ ತಲುಪಿದ ನಂತರ ವೈದ್ಯರು ಯುವತಿಯನ್ನು ಪರೀಕ್ಷಿಸಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.  ಬಹಳ ಸಂತೋಷದ ಮದುವೆ ಸಮಾರಂಭದಲ್ಲಿ ಇಂತಹ ಘಟನೆ ನಡೆದಾಗ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತೀವ್ರ ದುಃಖಿತರಾಗಿದ್ದರು.

ಯುಪಿಯ ಅಮ್ರೋಹಾ ಜಿಲ್ಲೆಯಲ್ಲಿ ಭಾನುವಾರ ಮತ್ತೊಂದು ದುರಂತ ಘಟನೆ ನಡೆದಿದೆ. ಅಮ್ರೋಹಾದ ಸೈದಂಗಲಿ ಪ್ರದೇಶದ 16 ವರ್ಷದ ದಿಲ್ಶಾದ್ ಖುರೇಷಿ  ಮೊಬೈಲ್​​ನಲ್ಲಿ ವಿಡಿಯೋ ನೋಡುತ್ತಿದ್ದ. ಹಠಾತ್ ಹೃದಯಾಘಾತದಿಂದ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದ.

ಬಹುತೇಕ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಸದ್ಯ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಜ್ಞರ ಪ್ರಕಾರ, ಕೋವಿಡ್ -19 ನಂತರ ಹೃದಯಾಘಾತ ಸಾವುಗಳು ಹೆಚ್ಚಿವೆ ಎಂದು NCRB ಬಹಿರಂಗಪಡಿಸಿದೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆ, ಅನಾರೋಗ್ಯ, ಅತಿಯಾದ ಡ್ಯಾನ್ಸ್, ವ್ಯಾಯಾಮ, ಡಿಜೆ ಸೌಂಡ್ ಗಳು ಜೋರಾಗಿ ಸದ್ದು ಮಾಡುವುದರಿಂದ ಹೃದಯಾಘಾತ ಉಂಟಾಗುತ್ತದೆ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net