More

    ಮನೆಯಿಂದಲೇ ಮತದಾನ ನಾಳೆಯಿಂದ

    ಏ.29ರಿಂದ ಮೇ 6ರವರೆಗೆ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮನೆಬಾಗಿಲಲ್ಲಿ ಮತದಾನ ನಡೆಯಲಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.

    ಶ್ರವಣ್‌ಕುಮಾರ್ ನಾಳ, ಮಂಗಳೂರು

    ಈ ಬಾರಿ 80 ವರ್ಷ ಮೇಲ್ಪಟ್ಟ ಹಾಗೂ ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ಮತದಾರರು ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಹೊಂದಿದ್ದು, ಏ.29ರಿಂದ ಮೇ 6ರ ವರೆಗೆ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮನೆಬಾಗಿಲಲ್ಲಿ ಮತದಾನ ನಡೆಯಲಿದೆ.

    ದ.ಕ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ಶೇ.40 ಹೆಚ್ಚು ಅಂಗವಿಕಲತೆ ಹೊಂದಿರುವ ಮತದಾರರ ಸಂಖ್ಯೆ 61,118. ಇದರಲ್ಲಿ 12,788 ಮಂದಿ ತಾವು ಸೂಚಿಸಿದ ಸ್ಥಳದಲ್ಲೇ ಮತ ಚಲಾಯಿಸಲಿದ್ದಾರೆ. 80 ವರ್ಷ ಮೇಲ್ಪಟ್ಟ 46,918 ಮತದಾರರಿದ್ದು, 10,808 ಮತದಾರರು ಮನೆಯಿಂದಲೇ ಮತ ಚಲಾಯಿಸಲಿದ್ದಾರೆ. ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ಮತದಾರರು 14,200 ಮತದಾರರಿದ್ದು, 1980 ಮತದಾರರು ಮನೆಯಿಂದಲೇ ಮತ ಚಲಾಯಿಸಲಿರುವರು.

    ಪೋಲಿಂಗ್ ತಂಡ ಭೇಟಿ

    ದ.ಕ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ಈಗಾಗಲೇ 268 ಪೋಲಿಂಗ್ ತಂಡ ರಚನೆಯಾಗಿದ್ದು, ಸುಮಾರು 1637 ಸಿಬ್ಬಂದಿ ಈ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡ ಏ.29ರಿಂದ ಮೇ 6ರ ವರೆಗೆ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡುಬಿದಿರೆ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಿಗದಿಪಡಿಸಿದ ಮನೆಗಳಿಗೆ ತೆರಳಿ ಮತಪತ್ರ ಪಡೆಯಲಿದೆ.

    ಕ್ಷೇತ್ರವಾರು ಮತಪತ್ರ

    ಬಂಟ್ವಾಳದ 7,684 ಮತದಾರರ ಪೈಕಿ 1410 ಮಂದಿ ಮನೆಯಿಂದಲೇ ಮತ ಚಲಾಯಿಸುವವರು. ಬೆಳ್ತಂಗಡಿಯಲ್ಲಿ 6751 ಮತದಾರರ ಪೈಕಿ 1707, ಮಂಗಳೂರಿನ 5081 ಮಂದಿಯ ಪೈಕಿ 748, ಮಂಗಳೂರು ಉತ್ತರ ಕ್ಷೇತ್ರದ 9253ರಲ್ಲಿ 1766, ಮಂಗಳೂರು ದಕ್ಷಿಣ ಕ್ಷೇತ್ರದ 12133 ಮಂದಿಯಲ್ಲಿ 2162, ಮೂಡುಬಿದರೆಯ 7349ರಲ್ಲಿ 1617, ಪುತ್ತೂರಿನ 6524ರ ಪೈಕಿ 1597, ಸುಳ್ಯದ 6343ರಲ್ಲಿ 1781 ಮತದಾರರು ಮನೆಯಿಂದಲೇ ಮತ ಚಲಾಯಿಸಲಿದ್ದಾರೆ.

    ಇದನ್ನೂ ಓದಿ: ದ.ಕ. ಜಿಲ್ಲೆ 43,701, ಉಡುಪಿಯಲ್ಲಿ 11,994 ಹೊಸಬರು ಮತಗಟ್ಟೆಯತ್ತ

    ಅಂಚೆ ಮತದಾನ

    ಚುನಾವಣಾ ಕರ್ತವ್ಯ ಹಿನ್ನೆಲೆಯಲ್ಲಿ ಅಗತ್ಯ ಸೇವಾ ಕರ್ತವ್ಯದಲ್ಲಿರುವ ಪೊಲೀಸರು, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ಸಾರಿಗೆ ಇಲಾಖೆ, ಏರ್‌ಪೋರ್ಟ್ ಸಿಬ್ಬಂದಿ ಮೇ 2ರಿಂದ 4ರ ವರೆಗೆ ಅಂಚೆ ಮೂಲಕ ಮತ ಚಲಾಯಿಸಲಿದ್ದಾರೆ. ಬಂಟ್ವಾಳ 673, ಬೆಳ್ತಂಗಡಿ 575, ಮಂಗಳೂರು 324, ಮಂಗಳೂರು ಉತ್ತರ ಕ್ಷೇತ್ರ 294, ಮಂಗಳೂರು ದಕ್ಷಿಣ 627, ಮೂಡುಬಿದರೆ 341, ಪುತ್ತೂರು 840, ಸುಳ್ಯ 909 ಮತದಾರರು ಅಂಚೆ ಮತದಾನ ಮಾಡುವರು. ಜತೆಗೆ ಆರೋಗ್ಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಒಟ್ಟು 117 ಸಿಬ್ಬಂದಿ ಅಂಚೆ ಮತದಾನ ಮಾಡಲಿದ್ದಾರೆ.

    ಹೀಗೆ ನಡೆಯಲಿದೆ ಮತದಾನ

    ಚುನಾವಣಾ ಆಯೋಗ 268 ಪೋಲಿಂಗ್ ತಂಡಗಳನ್ನು ತಾಲೂಕುವಾರು ನಿರ್ದಿಷ್ಟ ಸ್ಥಳಗಳಿಗೆ ನಿಯೋಜಿಸಿ ಏ.29ರಿಂದ ಮನೆ ಮನೆ ಭೇಟಿ ನೀಡುವಂತೆ ಸೂಚಿಸಿದೆ. ಇದಕ್ಕೆಂದೇ ಈಗಾಗಲೇ ಸೆಕ್ಟರ್ ವಾರ್ ರೂಟ್ ಮ್ಯಾಪ್ ತಯಾರಿಸಲಾಗಿದ್ದು, ಈ ತಂಡದಲ್ಲಿ ಓರ್ವ ವಿಡಿಯೋಗ್ರಾರ್, ಮೈಕ್ರೋ ಅಬ್ಸರ್‌ವರ್,ಭದ್ರತಾ ಸಿಬ್ಬಂದಿ ಇರುತ್ತಾರೆ. ಎಲ್ಲ ಮತದಾರರಿಗೆ ಎಸ್‌ಎಂಎಸ್/ಬಿಎಲ್‌ಒ/ ಪತ್ರ ಮುಖಾಂತರ ಮನೆ ಮನೆ ಭೇಟಿಯ ದಿನಾಂಕ – ಸಮಯ ನೀಡಲಾಗಿದೆ. ಮತದಾರ ಸ್ವಯಂಪ್ರೇರಿತವಾಗಿ ಅಥವಾ ಕುಟುಂಬದ ಸದಸ್ಯನ ಸಹಾಯ ಪಡೆದು ಮತ ಚಲಾಯಿಸಬಹುದು.

    ಏ.29ರಿಂದ ಮೇ 6ರ ವರೆಗೆ ವಿಧಾನಸಭಾ ಚುನಾವಣೆಯ ಮನೆ ಬಾಗಿಲಲ್ಲಿ ಮತದಾನ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ಶೇ.40 ಹೆಚ್ಚು ಅಂಗವಿಕಲತೆ ಹೊಂದಿರುವ ಮತದಾರರು ಈ ಬಾರಿ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ. ಇದಕ್ಕಾಗಿ 268 ಪೋಲಿಂಗ್ ತಂಡ ಮನೆ ಮನೆ ಭೇಟಿ ನೀಡಲಿದೆ.
    -ಪ್ರದೀಪ್ ಡಿಸೋಜ, ಪೋಸ್ಟಲ್ ಬ್ಯಾಲೆಟ್ ನೋಡಲ್ ಅಧಿಕಾರಿ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts