

ಕರಾವಳಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಮತ್ತೆ ಕಾಡುತ್ತಿದೆ. ಬಿಸಿಲಿನ ಬಿಸಿಯ ಜತೆಗೆ ಚುನಾವಣಾ ಕಾವು ಏರುತ್ತಿದ್ದು, ಈ ಬಾರಿ ಕುಡಿಯುವ ನೀರು ಚುನಾವಣಾ ಸರಕಾಗಿಲ್ಲ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಮತ್ತದೇ ಬೇಸಿಗೆ, ಮತ್ತದೇ ನೀರಿನ ಸಮಸ್ಯೆ. ಎಲ್ಲೆಲ್ಲೂ ನೀರಿನ ದಾಹ. ಹನಿ ನೀರಿಗೂ ತತ್ವಾರ. ಪಕ್ಕದಲ್ಲಿ ಸಮುದ್ರವಿದೆ, ಆದರೆ ಆ ನೀರು ಕುಡಿಯೋದಕ್ಕೆ ಸಾಧ್ಯವಿಲ್ಲ. ಈ ಸಲ ಕರಾವಳಿ ಪ್ರದೇಶ ಹಲವು ವರ್ಷಗಳ ನಂತರ ಜಲಕ್ಷಾಮ ಎದುರಿಸುತ್ತಿದೆ.
ಜನವರಿಯಲ್ಲೇ ಕೆರೆ ಬಾವಿಗಳು ಬತ್ತಲಾರಂಭಿಸಿದ್ದವು. ಮಾರ್ಚ್‌ಗಾಗುವಾಗ ಬಹುತೇಕ ಅಣೆಕಟ್ಟೆ, ಕಿಂಡಿ ಅಣೆಕಟ್ಟೆ, ಕೆರೆ, ಮದಗ, ಬಾವಿಗಳು ಬತ್ತಿಹೋಗಿ ತಳ ಕಾಣಿಸಿದೆ. ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಎಬ್ಬಿಸುವ ಪರಿಸ್ಥಿತಿ ಬಂದಿದೆ. ಒಂದೆಡೆ ಚುನಾವಣೆ ಕಾವು ಏರುತ್ತಿದ್ದರೆ ಅದರ ಹತ್ತು ಪಟ್ಟು ಬೇಸಿಗೆ ಸೆಖೆ ಏರಿದೆ. ನೀರಿನ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದರೂ ಯಾವ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗೆ ಇದು ಆದ್ಯತೆಯ ವಿಷಯ ಆಗದೆ ಇರುವುದು ಮಾತ್ರ ಆಶ್ಚರ್ಯವುಂಟು ಮಾಡುತ್ತಿದೆ.
ನೀರಿನ ಕುರಿತು ಗಂಭೀರವಾಗಿ ಚಿಂತಿಸುವ ಕಾಲ ಬಂದಿದೆ. ವಾರ್ಷಿಕ ಸರಾಸರಿ 3 ಸಾವಿರ ಮಿ.ಮೀ. ಮೇಲ್ಪಟ್ಟು ಮಳೆಯಾಗುವ ಕರಾವಳಿಯಲ್ಲಿ ಈ ಪರಿಯ ಜಲಸಂಕಷ್ಟಕ್ಕೆ ಕಾರಣ ಏನು ಎನ್ನುವುದನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ. ನೀರಿಗಾಗಿ ನೀರಿನಂತೆ ಅನುದಾನ ಹರಿಸಿದ್ದರೂ, ಕಿಂಡಿ ಅಣೆಕಟ್ಟೆಗಳನ್ನು ಧಾರಾಳವಾಗಿ ನಿರ್ಮಿಸಿದ್ದರೂ ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡುವುದು ತಪ್ಪಿಲ್ಲ ಎಂದರೆ ಯೋಜನೆಗಳನ್ನು ರೂಪಿಸುವಲ್ಲಿ ತಪ್ಪಾಗಿದೆ ಎಂದು ಅರ್ಥ.
ಜಿಲ್ಲೆಯ 162 ಗ್ರಾಮ ಪಂಚಾಯಿತಿಗಳು ಬೇಸಿಗೆ ಅಂದರೆ ಭಯಪಡುತ್ತವೆ. ಎಲ್ಲೆಲ್ಲೂ ನೀರು ಹುಡುಕಿ ಅಲೆಯುವ ದೃಶ್ಯ ಸಾಮಾನ್ಯ. ನೀರಿನ ಸಮಸ್ಯೆಯಿಂದ ನಗರ ಸಭೆ, ಪಟ್ಟಣ ಪಂಚಾಯಿತಿ ಕೂಡ ಮುಕ್ತವಾಗಿಲ್ಲ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ನೀರಿನ ಸಮಸ್ಯೆ ಇರುವ ಪ್ರದೇಶ ಗುರುತಿಸಿ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕಾಗುತ್ತದೆ. ಸ್ವರ್ಣಾ ನದಿ ಹರಿವು ನಿಂತು ಡ್ಯಾಮ್‌ನಲ್ಲಿ ನೀರಿನ ಸಂಗ್ರಹ ಯಾವ ಮೂಲೆಗೂ ಸಾಕಾಗುವುದಿಲ್ಲ. ಬೇಸಿಗೆಯಲ್ಲಿ ಮಳೆ ಬಾರದಿದ್ದರೆ ಜನರನ್ನು ದೇವರೇ ಕಾಯಬೇಕು ಎಂಬ ಪರಿಸ್ಥಿತಿಯಿದೆ.
ಗ್ರಾಮ ನಿವಾಸಿಗಳು ಲಕ್ಷಾಂತರ ಸುರಿದು ಬಾವಿ ತೋಡಿಕೊಂಡಿದ್ದರೂ, ಕಡು ಬೇಸಿಗೆಯಲ್ಲಿ ಕುಡ್ತೆ ನೀರು ಸಿಗುವುದಿಲ್ಲ. ಕಿಂಡಿ ಅಣೆಕಟ್ಟೆಗಳಿಗೆ ಸುರಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ. 70ಕ್ಕೂ ಮಿಕ್ಕಿ ಕಿರು ಕಿಂಡಿ ಅಣೆಕಟ್ಟೆಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ. ಜನಪ್ರತಿನಿಧಿಗಳಿಗೆ ಹಕ್ಕುಪತ್ರ, ಪ್ರವಾಸೋದ್ಯಮ ಅಭಿವೃದ್ಧಿ, ಅಕ್ರಮ ಸಕ್ರಮ, ಹಿಂದುತ್ವ ಪ್ರಚಾರದ ಸರಕಾದರೆ ನೀರಿನ ಬಗ್ಗೆ ಮಾತನಾಡುವವರು ಯಾರು? ರಸ್ತೆಯಿಲ್ಲ, ಡಾಂಬರು ಹಾಕಿಲ್ಲ, ಬಸ್ ಬರುವುದಿಲ್ಲ ಅಂತ ಮತದಾನ ಬಹಿಷ್ಕಾರ ಮಾಡುವವರು ನೀರಿನ ಸಮಸ್ಯೆ ಮುಂದಿಟ್ಟುಕೊಂಡು ಬಹಿಷ್ಕಾರ ಹಾಕಿದ್ದಿಲ್ಲ. ಈಗಲಾದರೂ ನೀರಿನ ಸಮಸ್ಯೆ ಬಗ್ಗೆ ಮಾತನಾಡಬೇಕಿದೆ. ರಾಜಕೀಯ ಪಕ್ಷಗಳು ಈ ಬಗ್ಗೆ ಮಾತನಾಡುವಂತೆ ಮಾಡಬೇಕಿದೆ. ಅಭ್ಯರ್ಥಿಗಳ ಬಳಿ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸುವ ಬಗ್ಗೆ ಕೇಳಬೇಕಾಗಿದೆ. ಕರಾವಳಿಯ ಪ್ರಬುದ್ಧ ಮತದಾರರು ಈಗ ಬಾಯಿಮುಚ್ಚಿ ಕುಳಿತರೆ ಭವಿಷ್ಯ ಇನ್ನಷ್ಟು ಕರಾಳವಾಗಬಹುದು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳು ಕೆರೆ, ಮದಗಗಳ ಹೂಳೆತ್ತಿದ್ದರೂ ಹೇಳಿಕೊಳ್ಳುವಂಥ ಪ್ರಯೋಜನ ಕಾಣಿಸುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೊದಲ ಸ್ಥಾನ ಪಡೆದ ಹಕ್ಲಾಡಿ ಗ್ರಾಮ ಪಂಚಾಯಿತಿಗೆ ಕೆರೆ, ಮದಗಗಳ ಹೂಳೆತ್ತಿ ಹೆಚ್ಚು ಉದ್ಯೋಗ ಕೊಟ್ಟಿದ್ದಕ್ಕಾಗಿ ಬಹುಮಾನದ ಗರಿ ಸಿಕ್ಕಿದೆ. ಆದರೆ ನೀರೆಷ್ಟು ಸಿಕ್ಕಿತು ಎನ್ನುವ ಲೆಕ್ಕವಿಲ್ಲ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಹೂಳೆತ್ತಿದ್ದರೂ ಕೆರೆಗಳಲ್ಲಿ ನೀರಿಲ್ಲ. ಬೃಹತ್ ನೀರಾವರಿ ಯೋಜನೆಯಲ್ಲಿ ಜಿಲ್ಲೆಗೆ ಸಿಕ್ಕ ಯಶಸ್ಸು ಕೇವಲ 16 ಪರ್ಸೆಂಟ್!
ಉಡುಪಿ ಜಿಲ್ಲೆಯಲ್ಲಿ 1702 ತೆರೆದ ಬಾವಿ, 4469 ಕೊಳವೆ ಬಾವಿ, 412 ಕೆರೆ ಇದೆ. ಒಟ್ಟು 123 ಕೆರೆಗಳನ್ನು 19.11 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನ ಮಾಡಲಾಗಿದೆ. ಪುನಶ್ಚೇತನ ಕೆರೆಗಳಿಗೆ ಅನುದಾನ ಖರ್ಚು ಮಾಡಿದ್ದೇ ಬಂತು, ನೀರು ನಾಪತ್ತೆ!
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮಸ್ಯೆಗೆ ಶಾಶ್ವತ ಪರಿಹಾರ. ನದಿಗಳಿಗೆ ಸ್ವಾಭಾವಿಕ ಕಟ್ಟೆ ಕಟ್ಟಿ ಫಿಲ್ಟರ್ ಮಾಡಿ ಟ್ಯಾಂಕ್ ಮೂಲಕ ನೀರು ಪೂರೈಸುವುದರಿಂದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದು. ಕೊಳವೆ ಮತ್ತು ತೆರೆದ ಬಾವಿ ನೀರಿನ ತೃಷೆ ಇಂಗಿಸೋದಿಲ್ಲ. ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಗುಲ್ವಾಡಿ ಏತ ನೀರಾವರಿ, ವಾರಾಹಿ ಬಲದಂಡೆ ಯೋಜನೆ, ಸೌಪರ್ಣಿಕಾ ಬಲದಂಡೆ ಯೋಜನೆ ಹೀಗೆ ದೊಡ್ಡದೊಡ್ಡ ಅನುದಾನದ ಯೋಜನೆ ಬಗ್ಗೆಯೇ ಜನಪ್ರತಿನಿಧಿಗಳ ಚಿತ್ತ ಹೊರಳುತ್ತಿದೆ. ವಾರಾಹಿ, ಸೌಪರ್ಣಿಕಾ ಏತ ನೀರಾವಾರಿ ಯೋಜನೆ ಹಳ್ಳಹಿಡಿದು ನೂರಾರು ಕೋಟಿ ಅನುದಾನ ನುಂಗಿಹಾಕಿದೆ. ಬೇಸಿಗೆಯಲ್ಲಿ ಸೌಪರ್ಣಿಕಾ ನದಿ ಬತ್ತಿ ಜಲಚರಗಳು ಸಾಯುತ್ತಿದ್ದು, ಚಕ್ರಹೊಳೆ ಕೂಡ ಸೌಪರ್ಣಿಕಾ ನದಿಗಿಂತ ಹೊರತಾಗಿಲ್ಲ. ಕುಬ್ಜಾ, ಖೇಟಿಕ ನದಿಗಳಂತೂ ಹರಿವು ನಿಲ್ಲಿಸಿಬಿಟ್ಟಿವೆ. ಜಲಮೂಲವೇ ಬರಿದಾಗುತ್ತಿದ್ದು, ಅದರ ಮರುಪೂರಣ ರಾಜಕಾರಣಿಗಳಿಗೂ, ಸಾರ್ವಜನಿಕರಿಗೂ ಬೇಕಿಲ್ಲ. ಸಮುದ್ರ ನೀರು ಪರಿವರ್ತಿಸಿ ಕುಡಿಯುವ ಕಾಲ ಕರಾವಳಿಗೆ ಬಂದರೂ ಅಚ್ಚರಿ ಪಡಬೇಕಾಗಿಲ್ಲ.
ಯೋಜನೆ ರೂಪಿಸುವವರಿಗೆ, ಚಾಲನೆ ಮಾಡುವ ಅಧಿಕಾರಿಗಳಿಗೆ ಕಿಂಚಿತ್ತಾದರೂ ಅನುಭವ ಇರಬೇಕು. ಜಿಲ್ಲೆಯಲ್ಲಿ ಮರೆಯಾಗುತ್ತಿರುವ ಮಳೆ ಕಾಡು, ಹಸಿರು ಹುಲ್ಲುಗಾವಲು, ಕರಾವಳಿ ಜಿಲ್ಲೆಯ ನೀರಾಶ್ರಿತ ತಾಣಗಳ ನಿರ್ಲಕ್ಷೃ, ಕೃಷಿ ಭೂಮಿ ಪಾಳು ಬಿಡುವುದು ನೀರಿನ ಸಮಸ್ಯೆಗೆ ಮೂಲ ಕಾರಣವಾಗಿದೆ. ಬಳಸುವ ಪ್ರಮಾಣದಷ್ಟು ನೀರಿನ ಮರು ಪೂರಣವಾಗುತ್ತಿಲ್ಲ. ಹರಿಯುವ ಮಳೆ ನೀರು ತಡೆದು, ಮಳೆ ನೀರು ನಿಲ್ಲಿಸಿ, ನಿಂತ ನೀರು ಭೂಮಿಗೆ ಇಂಗಿಸುವ ಪದ್ಧತಿಯನ್ನು ಹಿಂದೆ ಪರಿಸರವೇ ನಿರ್ವಹಿಸಿಕೊಂಡು ಬರುತ್ತಿತ್ತು. ಮಾನವರ ಜಂಗಲ್ ರಾಜ್ ಆಡಳಿತದಿಂದಾಗಿ ಎಲ್ಲವೂ ಮಾಯವಾಗುತ್ತಿದೆ. ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟೆಗಳ ಸರಿಯಾಗಿ ನಿರ್ವಹಣೆ ಮಾಡಿದರೆ ಸಮಸ್ಯೆ ಪರಿಹಾರ ಕಾಣಲು ಸಾಧ್ಯ.-ಉದಯ ಕುಮಾರ್ ಶೆಟ್ಟಿ ಅಡಕೆಕೊಡ್ಲುಅಧ್ಯಕ್ಷ ಜಿಲ್ಲಾ ರೈತ ಸಂಘ ವಂಡ್ಸೆ ವಲಯ