ರಾಜ್ಯಾದ್ಯಂತ ಮಕ್ಕಳ ಕಳ್ಳರು?; ಜನರ ಕೈಗೆ ಸಿಕ್ಕಿಹಾಕಿಕೊಂಡ ಇಬ್ಬರ ಪೈಕಿ ಒಬ್ಬನ ಜೇಬಲ್ಲಿದ್ದವು ಮಕ್ಕಳ ಫೋಟೋಗಳು!

Child
Published on

ಧಾರವಾಡ: ರಾಜ್ಯದಲ್ಲಿ ಕೆಲವು ದಿನಗಳಿಂದ ಮಕ್ಕಳ ಕಳ್ಳರ ಸುದ್ದಿ ಸದ್ದು ಮಾಡುತ್ತಿದ್ದು, ಕೆಲವೆಡೆ ಆ ಕುರಿತು ಆತಂಕ ಮೂಡಿದೆ. ಇಂದು ಕೂಡ ರಾಜ್ಯದ ಎರಡು ಕಡೆಗಳಲ್ಲಿ ಇಂಥದ್ದೇ ಪ್ರಕರಣ ನಡೆದಿದ್ದು, ಸಾರ್ವಜನಿಕರು ಇಬ್ಬರನ್ನು ಕೂಡಿ ಹಾಕಿದ ಘಟನೆಯೂ ನಡೆದಿದೆ. ಅಲ್ಲದೆ ಜನರ ಕೈಗೆ ಸಿಕ್ಕಿಹಾಕಿಕೊಂಡವರ ಪೈಕಿ ಒಬ್ಬನ ಕಿಸೆಯಲ್ಲಿ ಮಕ್ಕಳ ಫೋಟೋಗಳು ಸಿಕ್ಕಿರುವುದು ಆತಂಕವನ್ನು ಹೆಚ್ಚಿಸಿದೆ.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಹಿಂದಿ ಮಾತನಾಡುತ್ತ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಮಕ್ಕಳ ಕಳ್ಳ ಎಂದು ಭಾವಿಸಿದ ಗ್ರಾಮಸ್ಥರು, ಗ್ರಾಮದ ಮಧ್ಯ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಈ ಸಂಶಯಾಸ್ಪದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಶಯಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ ಆತನ ಜೇಬಿನಲ್ಲಿ ವಿವಿಧ ಮಕ್ಕಳ ಫೋಟೋಗಳಿರುವುದು ಕಂಡುಬಂದಿದ್ದು, ಅನೇಕರ ಗುರುತಿನ ಚೀಟಿ, ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳು ಕೂಡ ಸಿಕ್ಕಿವೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಮಕ್ಕಳ ಕಳ್ಳ ಎಂಬ ಅನುಮಾನ ಮೂಡಿಸಿದೆ. ಈತನ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಖಚಿತಪಡಬೇಕಿದೆ.

ಇನ್ನೊಂದೆಡೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ಮಹಿಳೆಯೊಬ್ಬಳನ್ನು ಮಕ್ಕಳ ಕಳ್ಳಿ ಎಂದುಕೊಂಡು ಸ್ಥಳೀಯರು ಕೂಡಿ ಹಾಕಿದ್ದಾರೆ. ಆಕೆಯ ಬಳಿ ಮತ್ತು ಬರಿಸುವ ಔಷಧ ಸೇರಿ ನಾನಾ ವಸ್ತುಗಳು ಇವೆ ಅಂತ ಜನರು ಹೇಳುತ್ತಿದ್ದು, ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ, ಮೂಗಿ ಎಂದೂ ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಖಚಿತಪಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net