ಭೀಕರ ಅಪಘಾತ: ಸೇತುವೆ ಮೇಲಿಂದ 30 ಅಡಿ ಕೆಳಗೆ ಬಿದ್ದ ವಾಹನ!; ಒಬ್ಬನ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ

Mahindra 2
Published on

ಬಾಗಲಕೋಟೆ: ಎರಡು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದು ವಾಹನ ಸೇತುವೆ ಮೇಲಿಂದ 30 ಅಡಿ ಕೆಳಗೆ ನದಿಗೆ ಬಿದ್ದ ಪ್ರಕರಣವೊಂದು ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಇಂದು ಈ ಅಪಘಾತ ಸಂಭವಿಸಿದ್ದು, ಒಬ್ಬ ಸಾವಿಗೀಡಾದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಜಯಪುರ ಜಿಲ್ಲೆ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಹುನಗುಂದ ಹಾಗೂ ಕೂಡಲಸಂಗಮ ಮಧ್ಯದಲ್ಲಿರುವ ಬೆಳಗಲ್ಲ ಸೇತುವೆ ಮೇಲೆ ಈ ಅಪಘಾತ ಸಂಭವಿಸಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಹಿಂದ್ರಾ ಗೂಡ್ಸ್ ವಾಹನ ಹಾಗೂ ಮಹಿಂದ್ರಾ ಎಕ್ಸ್​ಯುವಿ ಮಧ್ಯೆ ಈ ಅಪಘಾತವಾಗಿದೆ.

ಎಕ್ಸ್​ಯುವಿ ವಾಹನ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಗುದ್ದಿದ್ದು, ಆ ರಭಸಕ್ಕೆ ಗೂಡ್ಸ್ ವಾಹನ ಸೇತುವೆಯಿಂದ ನದಿಗೇ ಬಿದ್ದಿದೆ. ಗೂಡ್ಸ್ ವಾಹನ ಇಳಕಲ್​ನಿಂದ ಟೈಲ್ಸ್​ ತುಂಬಿಕೊಂಡು ಹೊರಟಿತ್ತು. ಎಕ್ಸ್​ಯುವಿ ಚಾಲಕನ ಅತಿವೇಗದ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಪ್ರಕರಣದಲ್ಲಿ ಗೂಡ್ಸ್​ ವಾಹನದಲ್ಲಿದ್ದ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಕ್ಸ್​ಯುವಿನಲ್ಲಿದ್ದ ಡ್ರೈವರ್, ಗಂಡ, ಹೆಂಡತಿ, ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ಹುನಗುಂದ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net