ಬರ್ತ್​ಡೇಗೆ ಬರುವವರಿಗೆ ರಿಯಲ್ ಸ್ಟಾರ್ ಉಪೇಂದ್ರ ಕಂಡಿಷನ್ ಇದು..

Upendra
Published on

ಬೆಂಗಳೂರು: ನಟ, ನಿರ್ದೇಶಕ, ಚಿತ್ರಸಾಹಿತಿ ರಿಯಲ್ ಸ್ಟಾರ್ ಉಪೇಂದ್ರ ಕೆಲವು ವರ್ಷಗಳಿಂದ ತಮ್ಮ ಜನ್ಮದಿನವನ್ನು ಅಭಿಮಾನಿಗಳ ದಿನವೆಂದೇ ಆಚರಿಸುತ್ತಿದ್ದಾರೆ. ನಾಳೆ ಸೆ. 18, ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ ಈಗಾಗಲೇ ಒಂದು ವಿಚಾರವನ್ನು ಹಂಚಿಕೊಂಡಿದ್ದ ಅವರು, ಮತ್ತೆ ಇನ್ನೊಂದು ಕಂಡಿಷನ್ ಹಾಕಿದ್ದಾರೆ.

ತಮ್ಮ ಜನ್ಮದಿನದಂದು ಶುಭಾಶಯ ಕೋರಲು ಬರುವವರಿಗೆ ಎರಡು ವಾರಗಳ ಹಿಂದೆ ವಿನಂತಿಯೊಂದನ್ನು ಮಾಡಿಕೊಂಡಿದ್ದ ಉಪೇಂದ್ರ, ಬಹುಮಾನ ಕೂಡ ಘೋಷಿಸಿದ್ದರು. ಜನ್ಮದಿನವಾದ ಸೆ. 18ರಂದು ಅಭಿಮಾನಿಗಳನ್ನು ತಮ್ಮ ಮನೆಯಲ್ಲೇ ಭೇಟಿ ಆಗುವುದಾಗಿ ಹೇಳಿರುವ ಅವರು, ಒಂದು ಹಾಳೆಯಲ್ಲಿ 18 ಪದಗಳಿಗೆ ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುವಂತೆ ಕೋರಿದ್ದರು. ಮಾತ್ರವಲ್ಲ, ಅತ್ಯುತ್ತಮವಾದ ಬರವಣಿಗೆಗೆ ಸೂಕ್ತ ಬಹುಮಾನ ನೀಡುವುದಾಗಿಯೂ ಹೇಳಿದ್ದರು.

ಇದೀಗ ಇನ್ನೊಮ್ಮೆ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ದಯವಿಟ್ಟು ಸಹಕರಿಸಿ ಎನ್ನುತ್ತಲೇ ಷರತ್ತೊಂದನ್ನು ಹಾಕಿದ್ದಾರೆ. 'ಅಭಿಮಾನಿಗಳ ದಿನದಂದು ಕೇಕ್ ಕಟಿಂಗ್, ಹಾರ, ಬೊಕ್ಕೆ, ಗಿಫ್ಟ್ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಫೋಟೋಗೆ ಮಾತ್ರ ಅವಕಾಶವಿರುತ್ತದೆ. ದಯವಿಟ್ಟು ಸಹಕರಿಸಿ..' ಎಂಬುದಾಗಿ ಉಪೇಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net