ಎರಡು ವರ್ಷಗಳ ದಾಂಪತ್ಯ, ಒಂದು ಸೀರೆಯಲ್ಲಿ ಅಂತ್ಯ; ಮಕ್ಕಳಿಲ್ಲ ಎಂಬ ಕೊರಗಿಗೆ ಪ್ರಾಣ ಕಳೆದುಕೊಂಡ ದಂಪತಿ..

Couple
Published on

ಚಿಕ್ಕಬಳ್ಳಾಪುರ: ಮಕ್ಕಳಿಲ್ಲ ಎಂಬ ಕೊರಗಿನಿಂದ ಜಿಗುಪ್ಸೆಗೆ ಒಳಗಾದ ದಂಪತಿಯ ಎರಡು ವರ್ಷಗಳ ದಾಂಪತ್ಯ ಒಂದು ಸೀರೆಯಲ್ಲಿ ಅಂತ್ಯವಾಗಿದೆ. ಅಂದರೆ ಪತಿ-ಪತ್ನಿ ಇಬ್ಬರೂ ಒಂದೇ ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರದ ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟೋಚಾಲಕನಾಗಿದ್ದ ಚಂದ್ರಶೇಖರ್​ (28) ಮತ್ತು ಶಶಿಕಲಾ (22) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಕ್ಕಳಿಲ್ಲ ಎಂಬ ಕೊರಗಿನಿಂದಾಗಿ ಇವರು ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇಂದು ಮನೆಯೊಳಗಿದ್ದ ದಂಪತಿ ಎಷ್ಟು ಹೊತ್ತಾದರೂ ಹೊರಗೆ ಕಾಣಿಸಿಕೊಳ್ಳದ್ದರಿಂದ ಅನುಮಾನಗೊಂಡ ಸ್ಥಳೀಯರು ಬಾಗಿಲು ತೆರೆದು ನೋಡಿದಾಗ ಇಬ್ಬರೂ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net