ಓಟಿಟಿ ವೇದಿಕೆಯತ್ತ ಪ್ರಿಯಾಂಕಾ ಉಪೇಂದ್ರ ‘ಸೇಂಟ್​ ಮಾರ್ಕ್ಸ್​ ರಸ್ತೆ’

st-marks-road-movie
Published on

ಬೆಂಗಳೂರು: ‘ಸೇಂಟ್​ ಮಾರ್ಕ್ಸ್​ ರಸ್ತೆ’ ಸಿನಿಮಾ ಕನ್ನಡ ಮತ್ತು ತಮಿಳಿನಲ್ಲಿ ಸಿದ್ಧವಾಗಿದೆ. ಮಗೇಶ್​ ಮತ್ತು ವೆಂಕಟೇಶ್​ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಹುತೇಕ ಎಲ್ಲ ಕೆಲಸಗಳನ್ನು ಮಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಎಲ್ಲಿ ಬಿಡುಗಡೆ ಮಾಡುವುದು ಎಂಬ ಗೊಂದಲದಲ್ಲಿದೆ ಚಿತ್ರತಂಡ. ಓಟಿಟಿನಾ ಅಥವಾ ಚಿತ್ರಮಂದಿರವಾ ಎಂದು ಲೆಕ್ಕಾಚಾರ ಹಾಕುತ್ತಿದೆ. ಆದರೆ, ಇವೆರಡಲ್ಲಿ ಓಟಿಟಿ ಕಡೆಗೆ ನಿರ್ದೇಶಕರ ಒಲವು ಜಾಸ್ತಿ ಇದೆ. ಓಟಿಟಿಯಲ್ಲಿಯೇ ತೆರೆಗೆ ತರಬೇಕೆನ್ನುತ್ತಿದ್ದಾರೆ.

ಪ್ರಿಯಾಂಕಾ ಉಪೇಂದ್ರ, ಮಹತ್​ ರಾಘವೇಂದ್ರ, ಸಾರಾ ವೆಂಕಟೇಶ್​ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಸೇಂಟ್​ ಮಾರ್ಕ್ಸ್​ ರಸ್ತೆ’ ಸಿನಿಮಾ, ನೈಜ ಘಟನೆ ಆಧರಿತ ಚಿತ್ರ. ಚೆನ್ನೈ ಮತ್ತು ಬೆಂಗಳೂರಿನಲ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಒಟ್ಟು 25 ದಿನಗಳಲ್ಲಿ ಸಿನಿಮಾ ಮುಗಿದಿದೆ.

ಈಗಾಗಲೇ ಸಾಕಷ್ಟು ಸಿನಿಮಾಗಳು ಓಟಿಟಿ ವೇದಿಕೆ ಏರಿವೆ. ಚಿತ್ರಮಂದಿರ ಬದಿಗಿಟ್ಟು ನೇರವಾಗಿ ಆನ್​ಲೈನ್​ನಲ್ಲಿ ಬಿಡುಗಡೆ ಆಗುತ್ತಿವೆ. ಅದರಲ್ಲೂ ಬಾಲಿವುಡ್​ನಲ್ಲಿ ಸ್ಟಾರ್ ಸಿನಿಮಾಗಳು ಅಮೆಜಾನ್​, ನೆಟ್​ಪ್ಲಿಕ್ಸ್ನಲ್ಲಿ ಬಿಡುಗಡೆ ಆಗುತ್ತಿವೆ. ಕನ್ನಡದಲ್ಲೂ ಆ ಪ್ರಯತ್ನಗಳು ನಡೆದಿವೆ. ‘ಒಳ್ಳೇ ಕಂಟೆಂಟ್​ ಇದ್ದರೆ ಸಿನಿಮಾವನ್ನು ಯಾರಾದರೂ ನೋಡಬಹುದು. ನಮ್ಮ ಸಿನಿಮಾದಲ್ಲೂ ಅಂಥದ್ದೇ ಅಂಶವಿದೆ. ಹಾಗಾಗಿ ಓಟಿಟಿನೇ ಬೆಸ್ಟ್ ಎಂದು ಪ್ಲ್ಯಾನ್​ ಮಾಡಿದ್ದೇವೆ. ಎಲ್ಲ ಅಂದುಕೊಂಡಂತೆ ಆದರೆ, ಜುಲೈ ಮಾಸಾಂತ್ಯಕ್ಕೆ ಬಿಡುಗಡೆ ಮಾಡಲಿದ್ದೇವೆ‘ ಎನ್ನುತ್ತಾರೆ ನಿರ್ದೇಶಕ ಮಗೇಶ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net