ಡಬ್ಬಲ್ ಹ್ಯಾಟ್ರಿಕ್ ಬಾರಿಸಿದ 'ಗೋಲ್ಡನ್​ ಸ್ಟಾರ್​'

Ganesh - Final
Published on

ಹಿಂದೊಮ್ಮೆ, ಒಬ್ಬ ನಟ ಮತ್ತು ನಿರ್ದೇಶಕನ ಚಿತ್ರ ಗೆದ್ದರೆ, ಆ ನಂತರ ಅವರು ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದರು. ಕನ್ನಡದಲ್ಲೇ ಉದಾಹರಣೆಗೆ ತೆಗೆದುಕೊಂಡರೆ, ಡಾ. ರಾಜಕುಮಾರ್​ ಅವರು ದೊರೆ-ಭಗವಾನ್​, ವಿಜಯ್​, ಸಿಂಗೀತಂ ಶ್ರೀನಿವಾಸ ರಾವ್​ ಮುಂತಾದವರ ಜತೆಗೆ ಹಲವು ಸಿನಿಮಾಗಳನ್ನು ಮಾಡಿದ್ದರು. ವಿಷ್ಣುವರ್ಧನ್​-ಭಾರ್ಗವ, ಅನಂತ್ ನಾಗ್​-ಫಣಿ ರಾಮಚಂದ್ರ, ಅಂಬರೀಶ್​-ಎ.ಟಿ. ರಘು ಮುಂತಾದವರ ಜೋಡಿ ಸೂಪರ್​ ಹಿಟ್​ ಆಗಿತ್ತು.

ಇತ್ತೀಚಿನ ದಿನಗಳಲ್ಲಿ ನಟ ಮತ್ತು ನಿರ್ದೇಶಕ ಜತೆಯಾಗಿ ಒಂದು ಚಿತ್ರ ಮಾಡಿದರೆ ಅದೇ ಹೆಚ್ಚಾಗುತ್ತದೆ. ಹೀಗಿರುವಾಗಲೇ, ಗಣೇಶ್​ ಡಬ್ಬಲ್​ ಹ್ಯಾಟ್ರಿಕ್​ ಬಾರಿಸಿದ್ದಾರೆ. ಗುರುವಾರವಷ್ಟೇ ಗಣೇಶ್ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್ನೂ ಎರಡು ಹೊಸ ಚಿತ್ರಗಳು ಘೋಷಣೆಯಾಗಿವೆ.

ಈ ಎರಡೂ ಚಿತ್ರಗಳ ಮೂಲಕ ಗಣೇಶ್, ಹ್ಯಾಟ್ರಿಕ್ ಸಾಧಿಸುವುದಕ್ಕೆ ಹೊರಟಿದ್ದಾರೆ. ಗಣೇಶ್ ಈ ಹಿಂದೆ ಸುನಿ ಮತ್ತು ಪ್ರಶಾಂತ್ ರಾಜ್ ಜತೆಗೆ ಎರಡೆರೆಡು ಚಿತ್ರಗಳಲ್ಲಿ ಅಭಿನಯಿಸಿದ್ದರು. ಸುನಿ ನಿರ್ದೇಶನದಲ್ಲಿ ‘ಚಮಕ್’ ಮತ್ತು ‘ಸಖತ್’ ಚಿತ್ರಗಳಲ್ಲಿ ನಟಿಸಿದರೆ, ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ‘ಜೂಮ್’ ಮತ್ತು ‘ಆರೆಂಜ್’ ಚಿತ್ರಗಳಲ್ಲಿ ನಟಿಸಿದ್ದರು. ಈಗ ಇಬ್ಬರೂ, ಗಣೇಶ್ ಜತೆಗೆ ತಮ್ಮ ಮೂರನೆಯ ಚಿತ್ರ ಮಾಡುವುದಕ್ಕೆ ಹೊರಟಿದ್ದು, ಈ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಗಣೇಶ್, ಡಬ್ಬಲ್ ಹ್ಯಾಟ್ರಿಕ್ ಮಾಡಿದ್ದಾರೆ.

ಈಗಾಗಲೇ ‘ಗಾಳಿಪಟ 2’ ಮತ್ತು ‘ಸಖತ್ ಚಿತ್ರಗಳಲ್ಲಿ ನಟಿಸುತ್ತಿರುವ ಗಣೇಶ್, ‘ತ್ರಿಲ್ ರೈಡಿಂಗ್’ ಎಂಬ ಇನ್ನೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ, ಸುನಿ ನಿರ್ದೇಶನದ ‘ದಿ ಸ್ಟೋರಿ ಆ್ ರಾಯಗಢ’ ಮತ್ತು ಪ್ರಶಾಂತ್ ರಾಜ್ ನಿರ್ದೇಶನದ ‘ಪ್ರೊಡಕ್ಷನ್ ನಂಬರ್ 7’ ಚಿತ್ರಗಳು ಹುಟ್ಟುಹಬ್ಬದ ಪ್ರಯುಕ್ತ ಹೊಸದಾಗಿ ಸೇರ್ಪಡೆಯಾಗುತ್ತಿವೆ.

ಈ ಎರಡೂ ಚಿತ್ರಗಳು ಘೋಷಣೆಯಾಗಿದ್ದರೂ, ಪ್ರಾರಂಭವಾಗುವುದಕ್ಕೆ ಇನ್ನೂ ಸಮಯವಿದ್ದು, ಬಹುಶಃ ಮುಂದಿನ ವರ್ಷ ಚಾಲನೆ ಸಿಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net