

ನಟ ರವಿಶಂಕರ್ ಗೌಡ ಕಳೆದೊಂದು ವಾರದಿಂದ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಅವರ ಅಪಾರ್ಟ್ಮೆಂಟ್ನಲ್ಲಿ ಕರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾದ ಹಿನ್ನೆಲೆಯಲ್ಲಿ, ರವಿಶಂಕರ್ ಮನೆಯೊಳಗೆ ಬಂಧಿಯಾಗಿದ್ದಾರೆ.
ಲಾಕ್ಡೌನ್ ಶುರುವಾದಾಗಿನಿಂದ, ಮನೆಯಲ್ಲಿ ಹಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುವ ರವಿಶಂಕರ್ ಗೌಡ, ಈಗ ವಿಷ್ಣುವರ್ಧನ್ ಅವರ ನೆನಪಲ್ಲಿ, ಅವರ ಹಳೆಯ ಜನಪ್ರಿಯ ಗೀತೆಯೊಂದನ್ನು ಹಾಡಿದ್ದಾರೆ. ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರ ಜನಪ್ರಿಯ ಗೀತೆಗಳಲ್ಲೊಂದು, 'ದೇವರ ಗುಡಿ' ಚಿತ್ರ 'ಮಾಮರವೆಲ್ಲೋ ಕೋಗಿಲೆಯಲ್ಲೋ ...' ಹಾಡು. ರಾಜನ್-ನಾಗೇಂದ್ರ ಸಂಗೀತ ನಿರ್ದೇಶನದ ಈ ಗೀತೆ, ಕನ್ನಡ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ಗೀತೆಗಳಲ್ಲೊಂದು. ಈ ಹಾಡನ್ನು ರವಿಶಂಕರ್ ಗೌಡ ಅವರು ವಿಷ್ಣುವರ್ಧನ್ ಅವರ ನೆನಪಲ್ಲಿ ಹಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ತುಂಬಾ ದಿನವಾಗಿತ್ತು ಹಾಡಿ. ನಿಮಗಾಗಿ ಹಾಗೂ ವಿಷ್ಣು ದಾದನ ನೆನಪಿಗಾಗಿ. ಕರುನಾಡಿನ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಈ ಗೀತೆ ಮರೆಯಲಾಗದ ಮಧುರ ಗೀತೆ' ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್, ಗಣೇಶ್ ಮುಂತಾದವರಿಗೆ ಟ್ಯಾಗ್ ಮಾಡಿದ್ದಾರೆ. ಈ ಹಾಡು ಕೇಳಿ ಮೆಚ್ಚಿಕೊಂಡಿರುವ ಸುದೀಪ್, 'ಗೆಳೆಯ ಬಹಳ ಚೆನ್ನಾಗಿ ಹಾಡುತ್ತೀಯ' ಎಂದು ಬೆನ್ನುತಟ್ಟಿದ್ದಾರೆ.
ರವಿಶಂಕರ್ ಚಿತ್ರರಂಗಕ್ಕೆ ಬರುವುದಕ್ಕೆ ಮುನ್ನ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು. ಸೌಂಡ್ ಆಫ್ ಮ್ಯೂಸಿಕ್ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಅವರು, ಒಳ್ಳೆಯ ಗಾಯಕ ಎಂದು ಹೆಸರು ಮಾಡಿದ್ದರು. ಆ ನಂತರ ಅವರು ನಟನೆಯತ್ತ ವಾಲಿದ್ದರೂ, ಹಾಡುವುದನ್ನೂ ಬಿಟ್ಟಿಲ್ಲ. ಸಮಯ ಸಿಕ್ಕಾಗಲೆಲ್ಲಾ, ಕನ್ನಡದ ಜನಪ್ರಿಯ ಹಾಡುಗಳನ್ನು ಹಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.