ಒಂದೇ ಚಿತ್ರಕ್ಕೆ 75 ಬಾರಿ ರಿಜೆಕ್ಟ್ ಆಗಿದ್ದರಂತೆ ವಿದ್ಯಾ!

Vidya Balan - Final
Published on

ಒಬ್ಬ ನಟ ಅಥವಾ ನಟಿ ಒಂದು ಚಿತ್ರದ ಆಡಿಷನ್‍ನಲ್ಲಿ ರಿಜೆಕ್ಟ್ ಆಗಿ, ಬೇರೆಯವರಿಗೆ ಆ ಪಾತ್ರವನ್ನು ಬಿಟ್ಟುಕೊಡುವುದು ಸಹಜ. ಆದರೆ, ಒಂದೇ ಚಿತ್ರಕ್ಕೆ 75 ಬಾರಿ ಯಾರಾದರೂ ರಿಜೆಕ್ಟ್ ಆಗಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಅಂಥದ್ದೊಂದ ಅಪರೂಪದ ದಾಖಲೆ ಮಾಡಿರುವವರು ನಟಿ ವಿದ್ಯಾ ಬಾಲನ್. `ಪರಿಣಿತ' ಚಿತ್ರದ ಆಡಿಷನ್‍ನಲ್ಲಿ ವಿದ್ಯಾ 75 ಬಾರಿ ಸೋತು ಕೊನೆಗೆ ಆಯ್ಕೆಯಾಗಿದ್ದರಂತೆ.

ವಿದ್ಯಾ ಬಾಲನ್ ಅವರ ಚಿತ್ರಜೀವನಕ್ಕೆ ತಿರುವು ಕೊಟ್ಟ ಚಿತ್ರವೆಂದರೆ, ಅದು ಪ್ರದೀಪ್ ಸರ್ಕಾರ್ ನಿರ್ದೇಶನದ `ಪರಿಣಿತಾ'. ಅದಕ್ಕೂ ಮುನ್ನ ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ವಿದ್ಯಾ, `ಪರಿಣಿತಾ' ನಂತರ ಬಾಲಿವುಡ್‍ನಲ್ಲಿ ಸ್ಟಾರ್ ನಟಿ ಎನಿಸಿಕೊಂಡರು. ಆದರೆ, ಆ ಚಿತ್ರಕ್ಕೆ ಆಯ್ಕೆಯಾಗುವುದು ಆಕೆಗೆ ಅಷ್ಟು ಸುಲಭವಾಗಿರಲಿಲ್ಲ. ಚಿತ್ರದಲ್ಲಿ ಆಡಿಷನ್‍ಗಳಲ್ಲಿ 75 ಬಾರಿ ಸೋತ ನಂತರ, ಕೊನೆಗೂ ಅವರು ಆಯ್ಕೆಯಾಗಿದ್ದಾರೆ.

ಈ ವಿಷಯವನ್ನು ಇದೀಗ ಸಂಗೀತ ನಿರ್ದೇಶಕ ಶಂತನು ಮೋಯೆತ್ರಾ ನೆನಪಿಸಿಕೊಂಡಿದ್ದಾರೆ. `ಪರಿಣಿತಾ' ಚಿತ್ರಕ್ಕೆ ಶಂತನು ಸಂಗೀತ ಸಂಯೋಜಿಸಿದ್ದರು. ವಿದ್ಯಾ ಆ ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ ಎನ್ನುವುದನ್ನು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. `ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಆಡಿಷನ್‍ಗಳು ನಡೆಯುತ್ತಲೇ ಇದ್ದವು. ವಿದ್ಯಾ ಸಹ ಆಡಿಷನ್‍ನಲ್ಲಿ ಭಾಗವಹಿಸುತ್ತಲೇ ಇದ್ದರು. ಪ್ರತಿ ಬಾರಿ ಏನೋ ಒಂದು ಸಮಸ್ಯೆಯಾಗಿ ಅವರು ರಿಜೆಕ್ಟ್ ಆಗುತ್ತಿದ್ದರು. ಆದರೆ, ಹಾಗಂತ ಅವರು ಹತಾಶರಾಗಲಿಲ್ಲ. ಪ್ರಯತ್ನ ಮಾಡುತ್ತಲೇ ಇದ್ದರು. ದೊಡ್ಡ ದೊಡ್ಡ ನಾಯಕಿಯರು ಆ ಪಾತ್ರಕ್ಕೆ ಪ್ರಯತ್ನ ನಡೆಸಿದ್ದರು. ಇನ್ನೊಂದು ಕಡೆ, ಚಿತ್ರರಂಗಕ್ಕೆ ಹೊಸಬರಾದ ವಿದ್ಯಾ ಬಾಲನ್ ಹೇಗಾದರೂ ಮಾಡಿ, ಆ ಚಿತ್ರಕ್ಕೆ ಆಯ್ಕೆಯಾಗಬೇಕು ಎಂದು ಪೈಪೋಟಿ ಮಾಡುತ್ತಿದ್ದರು' ಎಂದು ನೆನಪಿಸಿಕೊಂಡಿದ್ದಾರೆ ಶಂತನು.

ಹೀಗಿರುವಾಗಲೇ, ಅದೊಂದು ದಿನ ವಿದ್ಯಾ 75ನೇ ಬಾರಿಗೆ ರಿಜೆಕ್ಟ್ ಆಗಿದ್ದರಂತೆ. `ನನಗಿನ್ನೂ ನೆನಪಿದೆ. ಅಂದು ಮುಂಬೈನಲ್ಲಿ ಬ್ರಿಯಾನ್ ಆ್ಯಡಮ್ಸ್ ಅವರ ಕಾನ್ಸರ್ಟ್ ಇತ್ತು. ಅದಕ್ಕೆ ವಿದ್ಯಾ ಟಿಕೆಟ್ ಬುಕ್ ಮಾಡಿದ್ದರು. ಸಂಜೆ ಆ ಶೋಗೆ ಹೋಗಬೇಕಿತ್ತು. ಹೋಗುವುದಕ್ಕಿಂತ ಮುನ್ನ ಇನ್ನೊಂದು ಬಾರಿ ಪ್ರಯತ್ನಿಸು ಎಂದು ನಿರ್ದೇಶಕ ಪ್ರದೀಪ್ ಸರ್ಕಾರ್ ಹೇಳಿದ್ದರು. ಅದರಂತೆ ಮಧ್ಯಾಹ್ನ 3.30ರ ಹೊತ್ತಿಗೆ ವಿದ್ಯಾ ಆಡಿಷನ್ ಕೊಟ್ಟು ಹೊರಟುಹೋದರು. ಆ ನಂತರ ಪ್ರದೀಪ್ ಮತ್ತು ನಾನು, ಆ ವಿಡಿಯೋ ನೋಡುತ್ತಾ ಕುಳಿತಿದ್ದೆವು. ಅದರಲ್ಲಿನ ಒಂದು ಎಕ್ಸ್‍ಪ್ರೆಶನ್ ಪ್ರದೀಪ್‍ಗೆ ಬಹಳ ಇಷ್ಟವಾಗಿ, ಕೊನೆಗೆ `ಪರಿಣಿತಾ' ಸಿಕ್ಕಳು ಎಂದು ಖುಷಿಯಾದರು. `ಪರಿಣಿತಾ' ಚಿತ್ರಕ್ಕೆ ವಿದ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆ ನಂತರ ವಿದ್ಯಾಗೆ ಈ ವಿಷಯ ತಿಳಿಸಲಾಯಿತು. ವಿಷಯ ಕೇಳಿದ ವಿದ್ಯಾ, ಸಂತೋಷದಿಂದ ಅತ್ತಿದ್ದರಂತೆ. ಆ ಚಿತ್ರದ ನಂತರ ವಿದ್ಯಾ, ಚಿತ್ರರಂಗದಲ್ಲಿ ಬೆಳೆದ ರೀತಿ ಅದ್ಭುತ. ಅಷ್ಟೇ ಅಲ್ಲ, 75 ಬಾರಿ ಸೋತರೂ, ಅವರು ಇನ್ನೂ ಪ್ರಯತ್ನಿಸುತ್ತಲೇ ಇದ್ದರು ಎನ್ನುವುದು ಅವರು ಎಂಥಾ ಹೋರಾಟಗಾರ್ತಿ ಎನ್ನುವುದನನ್ನು ತೋರಿಸುತ್ತದೆ' ಎಂದು ಹೇಳಿಕೊಂಡಿದ್ದಾರೆ ಶಂತನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net