ಅಂಥ ನಿರ್ಧಾರಕ್ಕೆ ಯಾಕೆ ಬಂದೆ ಸುಶಾಂತ್​ ಅಂತ ಕೇಳಿದ್ದರು ಸರೋಜ್​

Saroj - Sushant - Final
Published on

ಶುಕ್ರವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದ ಬಾಲಿವುಡ್​ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್​ ಖಾನ್​ ಅವರು, ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ವಿಷಯ ಕೇಳಿ ಸಾಕಷ್ಟು ನೊಂದಿದ್ದರು. ಅಷ್ಟೇ ಅಲ್ಲ, ಈ ಕುರಿತು ಅವರು ಇನ್​ಸ್ಟಾಗ್ರಾಂನಲ್ಲಿ ಸಹ ಬರೆದುಕೊಂಡಿದ್ದರು.

ಸರೋಜ್​ ಖಾನ್​ ಮತ್ತು ಸುಶಾಂತ್​ ಸಿಂಗ್​ ರಜಪೂತ್​ ಯಾವತ್ತೂ ಜತೆಗೆ ಕೆಲಸ ಮಾಡಿರಲಿಲ್ಲ. ಅಷ್ಟೇ ಅಲ್ಲ, ಭೇಟಿಯಾಗಿದ್ದೂ ಕಡಿಮೆಯಂತೆ. ಹಾಗಿದ್ದರೂ, ಸುಶಾಂತ್​ ಅವರ ಆತ್ಮಹತ್ಯೆ ವಿಷಯ ಕೇಳಿ ಸರೋಜ್​ ಖಾನ್​ ತುಂಬಾ ನೊಂದಿದ್ದರು.

ಸುಶಾಂತ್​ ಸಾವಿನ ಕುರಿತಾಗಿ ಸಂತಾಪ ವ್ಯಕ್ತಪಡಿಸಿದ್ದ ಸರೋಜ್​ ಖಾನ್​, 'ನಾನು ಇದುವರೆಗೂ ನಿನ್ನ ಜತೆಗೆ ಕೆಲಸ ಮಾಡಿರಲಿಲ್ಲ ಸುಶಾಂತ್​. ಆದರೆ, ನಿನ್ನನ್ನು ಭೇಟಿ ಮಾಡುವ ಅವಕಾಶ ಕೆಲವೊಮ್ಮೆ ಸಿಕ್ಕಿತ್ತು. ಇಷ್ಟಕ್ಕೂ ನಿನಗಾದ ಸಮಸ್ಯೆಯೇನು. ನೀನು ಇಂಥದ್ದೊಂದು ನಿರ್ಧಾರಕ್ಕೆ ಯಾಕೆ ಬಂದೆ' ಎಂದು ಅವರು ತಮ್ಮ ಪೋಸ್ಟ್​ ಮೂಲಕ ಪ್ರಶ್ನಿಸಿದ್ದರು.

ಅಷ್ಟೇ ಅಲ್ಲ, ಈ ಬಗ್ಗೆ ಇನ್ನಷ್ಟು ಬರೆದಿದ್ದ ಅವರು, 'ನಿನಗೆ ಅಷ್ಟೊಂದು ಬೇಸರವಾಗಿದ್ದರೆ, ಯಾರಾದರೂ ಹಿರಿಯರ ಜತೆಗೆ ಮಾತನಾಡಬಹುದಿತ್ತು. ನಿನ್ನ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಿತ್ತು. ಖಂಡಿತಾ ಯಾರೇ ಆಗಿದ್ದರೂ ಸಹಾಯ ಮಾಡುತ್ತಿದ್ದರು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ಕುಟುಂಬದವರು ಅದೆಷ್ಟು ಸಂಕಟಪಡುತ್ತಿದ್ದಾರೋ ಗೊತ್ತಿಲ್ಲ. ದೇವರು ಅವರಿಗೆ ಶಕ್ತಿ ನೀಡಲಿ. ನಿನ್ನ ಎಲ್ಲಾ ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿದ್ದೆ' ಎಂದು ಬರೆದುಕೊಂಡಿದ್ದರು ಸರೋಜ್​ ಖಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net