More

    ವಿಜಯನಗರ ಅರಸರ ಕಾಲದ ಶಾಸನ ಪತ್ತೆ

    ಕೊಪ್ಪಳ: ತಾಲೂಕಿನ ಹುಲಿಗಿ ಬಳಿ ವಿಜಯನಗರ ಕಾಲುವೆ ಆಧುನೀಕರ ಕಾಮಗಾರಿ ವೇಳೆ ವಿಜಯನಗರ ಅರಸರ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಹುಲಿಗಿಗೆ ಕಾಲುವೆ ನಿರ್ಮಿಸಿ ನೀರು ಪೂರೈಸಿದ ಅಂಶವನ್ನು ಶಾಸನ ಒಳಗೊಂಡಿದೆ.

    ಹುಲಿಗಿ ಅಣೆಕಟ್ಟೆ ಬಳಿ ಕಾಮಗಾರಿ ವೇಳೆ ಶಾಸನ ಕಂಡಿದೆ. ತುಂಗಭದ್ರಾ ನದಿಯಲ್ಲಿ ನೀರು ಹರಿವು ಕಡಿಮೆಯಾಗಿರುವ ಕಾರಣ ಬೆಳಕಿಗೆ ಬಂದಿದೆ. ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿ ಮಲ್ಲಿಕಾರ್ಜುನ ಹೊಸಪಾಳ್ಯ ರಾಜ್ಯ ಪುರಾತತ್ವ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಂಪಿ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆ ಉಪ ನಿರ್ದೇಶಕ ಡಾ.ಆರ್. ಶೇಜೇಶ್ವರ ಹಾಗೂ ಸಹಾಯಕ ಆರ್. ಮಂಜನಾಯ್ಕ ಸ್ಥಳಕ್ಕೆ ತೆರಳಿ ಕ್ಷೇತ್ರ ಅಧ್ಯಯನ ನಡೆಸಿದ್ದಾರೆ.

    ಆರು ಸಾಲುಗಳುಳ್ಳ ವಿಜಯನಗರ ಅರಸರ ಕಾಲದ ಕನ್ನಡ ಶಾಸನವೆಂಬುದು ದೃಢಪಟ್ಟಿದೆ. ಸದಾ ನೀರಿನಲ್ಲಿ ಇದ್ದ ಕಾರಣ ಕೊಂಚ ಅಸ್ಪಷ್ಟವಾಗಿದ್ದರೂ ಓದಲು ಬರುವಂತಿದೆ. ಹೊಳೆ ಮುದ್ಲಾಪುರ ಬಳಿಯ ಹುಟ್ಟುಬಂಡೆ ಮೇಲೆ ಕೆತ್ತಲಾಗಿದೆ. 14 ಅಡಿ ಉದ್ದ 3 ಅಡಿ ಅಗಲವಾಗಿದೆ. ‘ವಿಜಯನಗರದ ಅರಸರ ಮಹಾಪ್ರಧಾನ ನಾಗಂಣಂದಂಣ ನಾಯಕನು ಮಲೀನಾಥ ದೇವರ ವಾಯುವ್ಯಕ್ಕೆ ಕಲ ಊರ ಎಂಬ ಸ್ಥಳದಲ್ಲಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ.

    ಈ ಕಟ್ಟೆಗೆ ಹುಲಿಗಿಯ ಕಟ್ಟ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆ ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ಕಾಲುವೆ ಮುಖಾಂತರ ನೀರನ್ನು ಹರಿಸಲಾಗಿದೆ’ ಎಂಬ ವಿಷಯವನ್ನು ಶಾಸನ ಒಳಗೊಂಡಿದೆ. ಕಾಲುವೆ ನಿರ್ಮಾಣದ ಉಲ್ಲೇಖವೂ ಇದೆ. ಡಾ.ಜಗದೀಶ ಅಗಸಿಬಾಗಿಲು ಎಂಬುವವರು ಶಾಸನ ಓದಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ ಎಂದು ಡಾ.ಆರ್.ಶೇಜೇಶ್ವರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts