'ಬೆಲ್​ ಬಾಟಮ್​' ಲೋಕೇಶ್​ ಆತ್ಮಹತ್ಯೆಗೆ ಕಾರಣ ಏನು?

Lokesh - Final
Published on

ಕರೊನಾ ಮತ್ತು ಲಾಕ್​ಡೌನ್​ನಿಂದ ಸಿನಿಮಾ ಕಲಾವಿದರು ಮತ್ತು ತಂತ್ರಜ್ಱರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸವಿಲ್ಲದೆ, ಆರ್ಥಿಕ ಸಂಕಷ್ಟದಿಂದ ಬಸವಳಿದಿದ್ದಾರೆ. ಗುರುವಾರ ಆತ್ಮಹತ್ಯೆಗೆ ಶರಣಾದ ಕಲಾ ನಿರ್ದೇಶಕ ಲೋಕೇಶ್​​ ಸಾವಿಗೂ ಇದೇ ಆರ್ಥಿಕ ಸಂಕಷ್ಟ ಎಂದು ಹೇಳಲಾಗುತ್ತಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಲೋಕೇಶ್​ ಗುರುತಿಸಿಕೊಂಡಿದ್ದರು. 'ಅವನೇ ಶ್ರೀಮನ್ನಾರಾಯಣ', 'ಬೆಲ್​ ಬಾಟಮ್​' ಮುಂತಾದ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದರಲ್ಲೂ, ಅವರನ್ನು 'ಬೆಲ್​ ಬಾಟಮ್​' ಲೋಕೇಶ್​ ಅಂತಲೇ ಕನ್ನಡ ಚಿತ್ರರಂಗದಲ್ಲಿ ಕರೆಯಲಾಗುತಿತ್ತು. ಅಷ್ಟೇ ಅಲ್ಲ, 'ಬೆಲ್​ ಬಾಟಮ್​' ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ವೇದಿಕೆ ಕರೆದು ಗೌರವಿಸಲಾಗಿತ್ತು.

ಹೀಗೆ ಕೆಲವು ಚಿತ್ರಗಳಿಗೆ ಕೆಲಸ ಮಾಡಿ, ಹಲವು ಕನಸುಗಳನ್ನು ಕಂಡಿದ್ದ ಲೋಕೇಶ್​ ಅವರಿಗೆ ಈ ಲಾಕ್​ಡೌನ್​ ತಂದಿಟ್ಟ ಸಮಸ್ಯೆ ಅಷ್ಟಿಷ್ಟಲ್ಲ. ಮೂಲತಃ ನಾಗಮಂಗಲದವರಾಗಿದ್ದ ಲೋಕೇಶ್​, ಕೆಲಸದ ಕಾರಣ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ನಿಧಾನಕ್ಕೆ ವೃತ್ತಿಜೀವನ ರೂಪಿಸಿಕೊಳ್ಳುತ್ತಿದ್ದ ಲೋಕೇಶ್​ ಅವರಿಗೆ ಕ್ರಮೇಣ ಒಂದೊಂದೇ ಚಿತ್ರದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಸಿಗುತಿತ್ತು.

ಜಯತೀರ್ಥ ನಿರ್ದೇಶನದ 'ಬೆಲ್​ ಬಾಟಮ್​ 2', 'ಬನಾರಸ್​' ಸೇರಿದಂತೆ ಕೆಲವು ಚಿತ್ರಗಳಿಗೆ ಅವರು ಕೆಲಸ ಮಾಡಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ನಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲಾಯಿತು. ಹೀಗೆ ಚಿತ್ರೀಕರಣ ನಿಂತಿದ್ದರಿಂದ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅವರಿಗೆ ಕೆಲಸವಿರಲಿಲ್ಲ.

ಒಂದು ಕಡೆ ಕೆಲಸ ಇಲ್ಲ, ಇನ್ನೊಂದು ಕಡೆ ಆರ್ಥಿಕ ಸಂಕಷ್ಟ ... ಇದೆಲ್ಲದರಿಂದ ಬೇಸತ್ತು ಲೋಕೇಶ್​ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net