ನಾನೂ ಉದ್ಧಾರ ಆಗಲಿಲ್ಲ, ಅಪ್ಪನನ್ನೂ ಸುಖವಾಗಿ ನೋಡಿಕೊಳ್ಳಲಿಲ್ಲ; ಶಂಕರ್​ ಅಶ್ವತ್ಥ್​

download
Published on

ಕನ್ನಡ ಚಿತ್ರರಂಗದ ಮೇರು ಕಲಾವಿದ​ ಕೆ.ಎಸ್​. ಅಶ್ವತ್ಥ್ ಅಂದತಕ್ಷಣ ಅವರ ಬಗೆಬಗೆಯ ಸಿನಿಮಾಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಅದ್ಬುತ ನಟನೆಯ ಮೂಲಕ ಸಿನಿರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಹೀಗಿರುವಾಗಲೇ ಅವರ ಪುತ್ರ ಶಂಕರ್​ ಅಶ್ವತ್ಥ್ ಇದೀಗ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ವಿಷ್ನುವರ್ಧನ್​ ನಟನೆಯ ಕರ್ಣ ಸಿನಿಮಾದ ಬಗ್ಗೆ ಫೇಸ್​ಬುಕ್​ನಲ್ಲಿ ಸುದೀರ್ಘವಾದ ಪತ್ರ ಬರೆದಿದ್ದಾರೆ. ಅದು ಇಲ್ಲಿದೆ.

‘ಟಿವಿಯಲ್ಲಿ " ಕರ್ಣ" ಸಿನಿಮಾ ನೋಡಿದಾಗ ನನ್ನ ಜೀವನದ ಘಟನೆ ನೆನಪು ಬಂದು ಇದನ್ನು ತಿಳಿಸುತ್ತಿದ್ದೇನೆ. ಈ ವಿಷಯ ನಾನು ತಿಳಿಸಲು ಕಾರಣ ಯಾರಿಂದಲೂ ಲೈಕ್ಸ್ ಗಿಟ್ಟಿಸಕ್ಕಾಗಲಿ ಪ್ರಚಾರಕ್ಕಾಗಲಿ ಅಲ್ಲ. ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ ಅವನೆಷ್ಟೇ ಬುದ್ಧಿವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಇದನ್ನು ಕೆಲವರು ಒಪ್ಪದೇ ಅತೀ ಬುದ್ಧಿವಂತಿಕೆಯಿಂದ ಯಾವುದರಲ್ಲಿ ಬೇಕಾದರೂ ತಪ್ಪನ್ನು ಹುಡುಕುತ್ತಾರೆ.ಅದೇ ಬುದ್ದಿವಂತರನ್ನು ಇಂದು ಕೊರೊನಾ ಬಗ್ಗೆ ಪ್ರಶ್ನಿಸಿದರೆ? ನೇರವಾದ ಉತ್ತರ ಸಿಕ್ಕಲ್ಲ. ಎಲ್ಲಾ ಭಗವಂತನ ಇಚ್ಛೆ.

ನಾನೂ ಜೀವನದಲ್ಲಿ ಏನೇನೋ ಮಾಡಿದೆ ಆದರೆ ಎಲ್ಲೂ ಉದ್ಧಾರ ಆಗಲಿಲ್ಲ, ಡಿ.ಫಾರ್ಮ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದರೂ ಏನು ಪ್ರಯೋಜನ ಆಗಲಿಲ್ಲ, ಮೆಡಿಕಲ್ ವ್ಯಾಪಾರ ಮಾಡಿದ್ರೂ ಅಲ್ಲೂ ಸೋಲು,ಕೌನ್ ಬನೇಗ ಕರೋಡ್ ಪತಿಗೆ ಸೆಲಕ್ಟ್ ಆಗಿ ಇಪ್ಪತ್ತು ವರ್ಷದ ಹಿಂದೆನೇ ನನ್ನ ತಂದೆ ಜೊತೆ ಹೋಗಿದ್ದೆ ಅಲ್ಲೂ ಟುಸ್, ಸೀರಿಯಲ್ ಬಹಳ ಇಷ್ಟಪಟ್ಟು ತಂದೆಯನ್ನು ಒಪ್ಪಿಸಿ ಕಷ್ಟಪಟ್ಟು ಮಾಡಿದೆ.ಅಲ್ಲೂ ಸೋತೆ ಯಾವುದಕ್ಕೂ ಜಗ್ಗದೆ ಹಾಗೆ ಜೀವನದಲ್ಲಿ ಮುಂದುವರೆದೆ ಕೊನೆಗೂ ನಾನು ಅಂದುಕೊಂಡಂತೆ ನನ್ನ ತಂದೆಯನ್ನು ಸುಖವಾಗಿ ನೋಡಿಕೊಳ್ಳಲು ಆಗಲಿಲ್ಲ.

ಆದರೆ ಬರೀ ವಿಧಿಯನ್ನೇ ನಿಂಧಿಸುತ್ತಾ ಸುಮ್ಮನೆ ಕೂರಲಿಲ್ಲ.ಕೈಯ್ಯಲ್ಲಾದದ್ದನ್ನು ಮಾಡುತ್ತಲೇ ಇಲ್ಲಿಯವರೆಗೂ ಬಂದೆ. ಮತ್ತೆ ಈಗಿನ ಸಂಧರ್ಭ ಅರವತ್ತು ವಯಸ್ಸಾದವರ ಸಂಕಷ್ಟ ಎಲ್ಲವನ್ನು ಮೆಲಕು ಹಾಕುತ್ತಾ ಇದ್ದೆ. ಅದಿರಲಿ ಇದನ್ನು ಪಸ್ತಾಪ ಮಾಡುವುದಕ್ಕೆ ಕಾರಣ ಕರ್ಣ ಚಿತ್ರದಲ್ಲಿ ನಾಯಕ ತನ್ನ ತಂದೆಗೆ ಸಹಾಯ ಮಾಡಲು ವ್ಯಥೆ ಪಡುವುದು, ಹಾಗೂ ತಂದೆಗೆ ಅರವತ್ತು ವಯಸ್ಸಾದರಿಂದ ಕಿಡ್ನಿ ಸ್ವೀಕರಿಸಲು ನಿರಾಕರಿಸುವುದು,ನೋಡಿ ಬರೆಯಬೇಕನ್ನಿಸಿತು ಬರೆದೆ‘ ಎಂದು ಭಾವುಕರಾಗುತ್ತಾರೆ.

ಜೀವನದಲ್ಲಿ ತುಂಬಾನೇ ಏಳು ಬೀಳುಗಳನ್ನು ಎದುರಿಸಿರುವ ಶಂಕರ್ ಅಶ್ವತ್ಥ್‌, ಕೈಗೆ ಸಿಕ್ಕ ಕೆಲಸವನ್ನೆಲ್ಲ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟನೆ ಮತ್ತು ಎಂದಿನಂತೆ ಕ್ಯಾಬ್​ ಚಾಲಕರಾಗಿಯೂ ಇಂದಿಗೂ ಆ ಕೆಲಸ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net