

ವಯನಾಡು: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಈ ಮೂಲಕ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿದಂತಾಯಿತು. ಪ್ರಿಯಾಂಕಾ ಸಹೋದರ ರಾಹುಲ್ ಗಾಂಧಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್ಬರೇಲಿ ಕ್ಷೇತ್ರದಿಂದ ಗೆದ್ದಿದ್ದು, ರಾಯ್ಬರೇಲಿಯನ್ನು ಉಳಿಸಿಕೊಂಡಿದ್ದರಿಂದ ವಯನಾಡು ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನ. 23ರಂದು ಫಲಿತಾಂಶ ಪ್ರಕಟವಾಗಲಿದೆ.
ವಯನಾಡಿಗೆ ಆಗಮಿಸಿದ ಪ್ರಿಯಾಂಕಾ ಅವರಿಗೆ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ರೋಡ್ ಷೋ ನಂತರ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋದರ ರಾಹುಲ್ ಗಾಂಧಿ ಮುಂತಾದವರು ಜೊತೆಗಿದ್ದರು. ತಾಯಿ ಸೋನಿಯಾ ಗಾಂಧಿ ಸ್ಥಳದಲ್ಲಿದ್ದರು. ಪತಿ ರಾಬರ್ಟ್ ವಾದ್ರಾ ಮತ್ತು ಪುತ್ರ ರೆಹಾನ್ ಡಿಸಿ ಕಚೇರಿ ಹೊರಗಿದ್ದರು. ‘ನನ್ನ ತಂದೆ ರಾಜೀವ್ ಗಾಂಧಿ ಪರವಾಗಿ ಪ್ರಚಾರ ಮಾಡಿದಾಗ ನನಗೆ 17 ವರ್ಷ. ನಂತರ ನನ್ನ ತಾಯಿ, ಸಹೋದರ ಹಾಗೂ ಇತರ ಅನೇಕ ನಾಯಕರ ಪರವಾಗಿಯೂ ಪ್ರಚಾರ ಮಾಡಿದೆ. ಕಳೆದ 35 ವರ್ಷಗಳಿಂದ ಭಿನ್ನ ಭಿನ್ನ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದೇನೆ. ಆದರೆ ಈಗ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಮತ್ತು ನನಗಾಗಿ ನಿಮ್ಮ ಬೆಂಬಲ ಕೋರುತ್ತಿದ್ದೇನೆ’ಎಂದು ಪ್ರಿಯಾಂಕಾ ಹೇಳಿದರು. ‘ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಹುಲ್ ನನಗೆ ವಿವರವಾಗಿ ತಿಳಿಸಿದ್ದಾರೆ. ನೇರವಾಗಿ ನೀವಿದ್ದಲ್ಲಿಗೇ ಬಂದು ನಿಮ್ಮ ಸಮಸ್ಯೆ, ಕಷ್ಟಗಳನ್ನು ಆಲಿಸಿ ಪರಿಹಾರ ಹುಡುಕಲು ಯತ್ನಿಸುವೆ’ ಎಂದು ಅವರು ಹೇಳಿದರು.
ಭರ್ಜರಿ ಜಯ ಗಳಿಸಿದ್ದ ರಾಹುಲ್: ಈ ವರ್ಷದ ಏಪ್ರಿಲ್ 26ರಂದು ನಡೆದ ಚುನಾವಣೆ ಯಲ್ಲಿ ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದ 3,64,422 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು. ಈಗ ನಡೆಯುವ ಉಪಚುನಾವಣೆಯಲ್ಲಿ ವಯನಾಡಿನಲ್ಲಿ ಎಲ್ಡಿಎಫ್ನಿಂದ ಸತ್ಯನ್ ಮೊಕೇರಿ ಹಾಗೂ ಬಿಜೆಪಿಯಿಂದ ನವ್ಯಾ ಹರಿದಾಸ್ ಕಣದಲ್ಲಿದ್ದಾರೆ.
ಸಂಸತ್ನಲ್ಲಿ ತಾಯಿ, ಮಕ್ಕಳು: ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಆಯ್ಕೆಯಾದರೆ, ಕುಟುಂಬದ ಮೂರು ಮಂದಿ ಏಕಕಾಲಕ್ಕೆ ಸಂಸತ್ನಲ್ಲಿ ಇದ್ದಂತಾಗುತ್ತದೆ. ಸೋನಿಯಾ ಗಾಂಧಿ 2024ರ ಏಪ್ರಿಲ್ನಲ್ಲಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ರಾಹುಲ್ ರಾಯ್ ಬರೇಲಿಯನ್ನು ಪ್ರತಿನಿಧಿಸುತ್ತಿದ್ದಾರೆ.
ಜನನ: 1972, ಜನವರಿ 12
ಶಿಕ್ಷಣ: ಡೆಹ್ರಾಡೂನ್ನಲ್ಲಿ ಆರಂಭಿಕ ಶಿಕ್ಷಣ. ದೆಹಲಿ ವಿವಿ ವ್ಯಾಪ್ತಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಪದವಿ ಪಡೆದರು. ತರುವಾಯ ಬೌದ್ಧ ಅಧ್ಯಯನದ ಮೇಲೆ ಸ್ನಾತಕೋತ್ತರ ಪದವಿ ಪಡೆದರು.
ವಿವಾಹ: ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು 1997ರಲ್ಲಿ ವರಿಸಿದರು. ಇಬ್ಬರು ಮಕ್ಕಳು. ಪುತ್ರ ರೆಹಾನ್. ಪುತ್ರಿ ಮಿರಾಯಾ.
ರಾಜಕೀಯ ರಂಗ: 2020ರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗುವ ಮುನ್ನ, ಪೂರ್ವ ಉ.ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದರು.
ಆಸ್ತಿ: ಪ್ರಿಯಾಂಕಾ ತಮ್ಮ ಬಳಿ ₹12 ಕೋಟಿ ಆಸ್ತಿ, ಪತಿ ಬಳಿ ₹65 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ.
ಪ್ರಿಯಾಂಕಾ ತನ್ನ ಕುಟುಂಬ ಹಾಗೂ ಸ್ನೇಹಿತ ವಲಯಕ್ಕಾಗಿ ಯಾವ ತ್ಯಾಗವನ್ನಾದರೂ ಮಾಡಬಲ್ಲರು. ಈ ಗುಣದಿಂದಾಗಿ ಆಕೆ ವಯನಾಡಿಗೆ ಉತ್ತಮ ಜನಪ್ರತಿನಿಧಿ ಆಗಬಲ್ಲರು. ನೀವು ನನಗೆ ತೋರಿದ ಪ್ರೀತ್ಯಾದರ ಮತ್ತು ಬೆಂಬಲವನ್ನು ಸೋದರಿ ಪ್ರಿ್ರಾಂಕಾಗೂ ತೋರಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಾನು ಅನೌಪಚಾರಿಕ ಸಂಸದನಾಗಿ ಸದಾ ವಯನಾಡಿನ ಜನರ ಜೊತೆಗೆ ನಿಲ್ಲುತ್ತೇನೆ.
| ರಾಹುಲ್ ಗಾಂಧಿ ಲೋಕಸಭೆ ವಿಪಕ್ಷ ನಾಯಕ