ನೈರೋಬಿ: ಇಲ್ಲಿನ ರುರಾಕಾ ಸ್ಫೋರ್ಟ್ಸ್ ಕ್ಲಬ್ನಲ್ಲಿ ಗ್ಯಾಂಬಿಯಾ (Gambia) ವಿರುದ್ಧ ನಡೆದ ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಜಿಂಬಾಬ್ವೆ (Zimbabwe) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (T20 Internatioinal Cricket) ಹೊಸ ದಾಖಲೆಯನ್ನು ನಿರ್ಮಿಸಿದೆ. 20 ಓವರ್‌ಗಳಲ್ಲಿ 344 ರನ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತದ ಹೆಸರಿನಲ್ಲಿದ್ದ ರೆಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ (Zimbabwe) ನಾಯಕ ಸಿಕಂದರ್ ರಾಜಾ (133 ರನ್, 43 ಎಸೆತ, 7 ಬೌಂಡರಿ, 15 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ಫಲವಾಗಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿತು. ಬೃಹತ್ ಗುರಿಯನ್ನು ಬೆನ್ನತ್ತಿದ್ದ ಗ್ಯಾಂಬಿಯಾ ತಂಡವು 14.4 ಓವರ್‌ಗಳಲ್ಲಿ 54 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಜಿಂಬಾಬ್ವೆ ತಂಡವು 290 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು.
ಗ್ಯಾಂಬಿಯಾ ಎದುರು 344 ರನ್ ಸಿಡಿಸುವ ಮೂಲಕ ಜಿಂಬಾಬ್ವೆ ತಂಡವು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಐಸಿಸಿಯ ಪೂರ್ಣ ಸದಸ್ಯ ತಂಡ ಎಂಬ ವಿಶ್ವದಾಖಲೆ ನಿರ್ಮಿಸಿದೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧ 297 ರನ್ ಗಳಿಸಿದ್ದ ಟೀಮ್ ಇಂಡಿಯಾ ಹೆಸರಿನಲ್ಲಿ ಈ ದಾಖಲೆ ಇತ್ತು. ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಕಲೆಹಾಕಿದ 344 ರನ್ಗಳಲ್ಲಿ 282 ರನ್ಗಳು ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ ಬಂದವು. ಈ ಮೂಲಕ ಕೇವಲ ಬೌಂಡರಿ ಹಾಗೂ ಸಿಕ್ಸರ್ಗಳ ಮೂಲಕ ಇಷ್ಟು ರನ್ ಕಲೆಹಾಕಿದ ಮೊದಲ ತಂಡ ಎಂಬ ವಿಶ್ವದಾಖಲೆ ಸಹ ಜಿಂಬಾಬ್ವೆ ಪಾಲಾಗಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಬೌಂಡರಿಗಳ ನೆರವಿನಿಂದ ಟೀಮ್ ಇಂಡಿಯಾ 232 ರನ್ ಗಳಿಸಿತ್ತು.
Records went for a toss as a Sikander Raza special powered Zimbabwe to a world record T20I score of 344! 🔥 pic.twitter.com/eiXXg2TQRD
— FanCode (@FanCode) October 23, 2024
ಗ್ಯಾಂಬಿಯಾ ವಿರುದ್ಧ 57 ಬೌಂಡರಿಗಳನ್ನು ಬಾರಿಸಿದ ಜಿಂಬಾಬ್ವೆ, ಟಿ20 ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ 47 ಬೌಂಡರಿ ಬಾರಿಸಿತ್ತು. ಇದಲ್ಲದೆ ಒಂದೇ ಇನ್ನಿಂಗ್ಸ್‌ನಲ್ಲಿ 27 ಸಿಕ್ಸರ್ ಬಾರಿಸಿದ ದಾಖಲೆ ಜಿಂಬಾಬ್ವೆ ಪಾಲಾಗಿದೆ. ಇದಕ್ಕೂ ಮುನ್ನ ಣೇಪಾಳ ತಂಡವು 26 ಸಿಕ್ಸರ್ ಬಾರಿಸಿದ್ದು ದಾಖಲೆಯಾಗಿತ್ತು. ಗ್ಯಾಂಬಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಕೇವಲ 12.5 ಓವರ್‌ಗಳಲ್ಲಿ 200 ರನ್ ಪೂರೈಸಿತು. ಈ ಮೂಲಕ ಅಂತರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 200 ರನ್ ಗಳಿಸಿದ ತಂಡವೆಂಬ ಹೆಗ್ಗಳಿಕೆಗೂ ಜಿಂಬಾಬ್ವೆ ಪಾತ್ರವಾಗಿದೆ. ಈ ಹಿಂದೆ 13.5 ಓವರ್‌ಗಳಲ್ಲಿ ಈ ಸಾಧನೆ ಮಾಡಿದ್ದ ದಕ್ಷಿಣ ಆಫ್ರಿಕಾ ಹೆಸರಲ್ಲಿ ಈ ದಾಖಲೆ ಇತ್ತು.
ಜಿಂಬಾಬ್ವೆ ನೀಡಿದ 344ರನ್‌ಗಳ ಗುರಿ ಬೆನ್ನಟ್ಟಿದ ಗ್ಯಾಂಬಿಯಾ ತಂಡ ಕೇವಲ 54 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಜಿಂಬಾಬ್ವೆ ತಂಡ ಬರೋಬ್ಬರಿ 290 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಗೆಲುವು ದಾಖಲಿಸಿದ ದಾಖಲೆಯೂ ಜಿಂಬಾಬ್ವೆ ಪಾಲಾಗಿದೆ. ಜಿಂಬಾಬ್ವೆಯ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಸಿಕಂದರ್ ರಾಝಾ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದರು. ಇದರೊಂದಿಗೆ ಐಸಿಸಿಯ ಪೂರ್ಣ ಸದಸ್ಯ ತಂಡದ ಆಟಗಾರನೊಬ್ಬ ಸಿಡಿಸಿದ ವೇಗದ ಶತಕ ಎಂಬ ದಾಖಲೆ ರಾಝಾ ಪಾಲಾಯಿತು. ಇದಲ್ಲದೆ ಅವರು 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಅವರ ದಾಖಲೆಯನ್ನು ಮುರಿದರು.
ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ; ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮನ ಜಯಂತಿ ಆಚರಣೆ