810 ಕೆಜಿ ತೂಕದ 666 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದ ವಾಹನ ತಮಿಳುನಾಡಲ್ಲಿ ಪಲ್ಟಿ! ನಂತರ ನಡೆದಿದ್ದಿಷ್ಟು…

Gold Vehicle 1
Published on

ಚೆನ್ನೈ: ಬರೋಬ್ಬರಿ 666 ಕೋಟಿ ರೂಪಾಯಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಖಾಸಗಿ ಕಂಟೈನರ್ ಸೋಮವಾರ (ಮೇ 06) ತಡರಾತ್ರಿ ತಮಿಳುನಾಡಿನ ಈರೋಡ್ ಬಳಿಯ ಚಿತೋಡ್​ನಲ್ಲಿ ಮಗುಚಿ ಬಿದ್ದಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಖಾಸಗಿ ಲಾಜಿಸ್ಟಿಕ್ಸ್​ ಸಂಸ್ಥೆಗೆ ಸೇರಿದ ಕಂಟೈನರ್ 810 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳನ್ನು ತುಂಬಿಕೊಂಡು ಕೊಯಮತ್ತೂರಿನಿಂದ ಸೇಲಂಗೆ ತೆರಳುತ್ತಿತ್ತು. ಸಮತುವಪುರಂ ಬಳಿಯ ತಿರುವಿನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು, ಪಲ್ಟಿ ಹೊಡೆದು, ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಶಶಿಕುಮಾರ್ ಮತ್ತು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಬಾಲರಾಜ್ ಇಬ್ಬರಿಗೂ ಗಂಭೀರ ಗಾಯಗಳಾಗಿವೆ.

ಘಟನೆಯ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿತ್ತೋಡ್​ ಪೊಲೀಸರು ಇಬ್ಬರನ್ನು ವಾಹನದಿಂದ ಹೊರತೆಗೆದಿದ್ದಾರೆ ಮತ್ತು ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ವಾಹನದಲ್ಲಿ ಸಂಗ್ರಹಿಸಿಟ್ಟಿದ್ದ ಚಿನ್ನಾಭರಣಗಳು ಸುರಕ್ಷಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಭರಣಗಳ ಮಾಲೀಕರಿಗೆ ಮಾಹಿತಿ ನೀಡಲಾಗಿದೆ.

ಜನಸಂದಣಿ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಒಂದು ವೇಳೆ ಚಿನ್ನ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿದೆ ಎಂದು ಜನರಿಗೆ ತಿಳಿದಿದ್ದರೆ ಚಿನ್ನವೆಲ್ಲವನ್ನು ದೋಚಿಬಿಡುತ್ತಿದ್ದರು ಪೊಲೀಸರು ಕೂಡ ಏನೂ ಮಾಡಲು ಆಗುತ್ತಿರಲಿಲ್ಲ. ಆದರೆ, ತಡರಾತ್ರಿಯಾದ್ದರಿಂದ ಪೊಲೀಸರ ಕೆಲಸ ಸುಲಭವಾಯಿತು. ಕೂಡಲೇ ಇನ್ನೊಂದು ವಾಹನಕ್ಕೆ ಕರೆ ಮಾಡಿ ಚಿನ್ನಾಭರಣಗಳನ್ನು ವಾಹನಕ್ಕೆ ತುಂಬಿಸಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net