More

    ಪ್ರಧಾನಿ ಮೆಗಾ ರೋಡ್ ಶೋ ಅಂತ್ಯ | ದಾರಿಯುದ್ದಕ್ಕೂ ಮೊಳಗಿದ ‘ಮೋದಿ…ಮೋದಿ…’ ಘೋಷಣೆ;

    ಬೆಂಗಳೂರು: ಮೋದಿ ಮೆಗಾ ರೋಡ್​ ಶೋ ಶ್ರೀ ಸೋಮೇಶ್ವರ ಸಭಾ ಭವನದಿಂದ ಆರಂಭವಾಗಿ, ಜೆಪಿ ನಗರ ಐದನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಇಗ್ನಲ್, ಚಾಮರಾಜಪೇಟೆ ಐದನೇ ಮೇನ್, ಈದ್ಗಾ ಮೈದಾನ, ಮೈಸೂರು ಸಿಗ್ನಲ್, ಟೋಲ್‌ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರಸ್ತೆ ಜಂಕ್ಷನ್, ಶಂಕರ ಮಠ ಚೌಕ, ಮಲ್ಲೇಶ್ವರ ವೃತ್ತ ಮೂಲಕ ಸಾಗಿ ಸಂಪಿಗೆ ರಸ್ತೆ (18ನೇ ಅಡ್ಡ ರಸ್ತೆ ಜಂಕ್ಷನ್)ಯಲ್ಲಿ ಕೊನೆಗೊಂಡಿತು.

    ಸ್ವಾಮೀಜಿಗಳಿಂದ ಆಶೀರ್ವಾದ

    ಬಸವನಗುಡಿ ರಾಮಕೃಷ್ಣ ಆಶ್ರಮದ ಬಳಿ ರೋಡ್ ಶೋ ಬಂದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಆಶ್ರಮ ಸ್ವಾಮೀಜಿಗಳನ್ನು ಕಂಡ ಮೋದಿಯರು ಕೈ ಮುಗಿದು ಆಶೀರ್ವಾದ ಬೇಡಿದರು. ಸ್ವಾಮೀಜಿಗಳೆಲ್ಲರೂ ಆಶೀರ್ವಾದ ಮಾಡಿದರು. ಜತೆಗೆ ಪುಸ್ತಕ ಉಡುಗೊರೆ, ಹೂವಿನ ಹಾರವನ್ನು ಮೋದಿ ತಮ್ಮ ಸಿಬ್ಬಂದ ಮುಖೇನ ಸ್ವೀಕರಿಸಿದರು.

    ಇದನ್ನೂ ಓದಿ: ಬೇರೆ ಕಾರ್ಯಕ್ರಮ ಹಿನ್ನೆಲೆ ಕಾಡು ಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡದೆ ತೆರಳಿದ ಪ್ರಧಾನಿ ಮೋದಿ

    ಮುಸ್ಲಿಂ ಸಮುದಾಯ ಹಾಜರಿ

    ಚಾಮರಾಜಪೇಟೆಯಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಗುಂಪುಗುಂಪಾಗಿ ಜಮಾಯಿಸಿದ್ದು ವಿಶೇಷವಾಗಿತ್ತು. ಮೋದಿಯವರನ್ನು ಸ್ವಾಗತಿಸಲು ಕೈಯಲ್ಲಿ ಹೂವಿನ ಪಕಳೆ ಹಿಡಿದು ಒಂದು ಗಂಟೆಯಿಂದಲೂ ಕಾಯ್ದಿದ್ದರು. ಇವರನ್ನು ವಿಜಯವಾಣಿ ಮಾತನಾಡಿಸಿದಾಗ, ‘ಪ್ರಧಾನಿಯವರನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿದೆ, ನೋಡಲು ಬಂದಿದ್ದೇವೆ. ನಾವು ಬಿಜೆಪಿ ಪರವಲ್ಲ. ಮೋದಿ ನೋಡುವುದಕ್ಕೆ ಬಂದಿದ್ದೇವೆ’ ಎಂದರು.

    ಮಕ್ಕಳ ನೃತ್ಯ

    ಜಯನಗರದಲ್ಲಿ ನೃತ್ಯ ಶಾಲೆಯ ಮಕ್ಕಳು ಸಾಮೂಹಿಕ ನೃತ್ಯ ಪ್ರದರ್ಶಿಸಿ ಮೋದಿಯವರನ್ನು ಸ್ವಾಗತಿಸಿದರು. ಸುತ್ತ ಮುತ್ತ ಸೇರಿದ್ದ ಜನರೂ ಸಹ ಈ ನೃತ್ಯ ವೀಕ್ಷಿಸಿ ಖುಷಿಪಟ್ಟರು. ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ಪುಟ್ಟ ಮಕ್ಕಳು ನೃತ್ಯ ಮಾಡುತ್ತಲೇ ಆ ವಾತಾವರಣಕ್ಕೆ ಕಳೆತುಂಬಿದರು.

    92 ವರ್ಷರ ವೃದ್ಧ

    ರೋಡ್ ಶೋ ಉದ್ಧಕ್ಕೂ ಅಬಾಲವೃದ್ಧರಾದಿಯಾಗಿ ಜನರ ಪಾಲ್ಗೊಂಡಿದ್ದರು. ಚಾಮರಾಜಪೇಟೆಯಲ್ಲಿ ನಾರಾಯಣಪ್ಪ ಎಂಬ 92 ವರ್ಷದ ವೃದ್ಧರೊಬ್ಬರು ಮೋದಿ ನೋಡಲು ಆಗಮಿಸಿದ್ದರು. ಅವರನ್ನು ಮಾತಿಗೆಳೆದಾಗ, ನಾನು ನಿವೃತ್ತ ಸರ್ಕಾರಿ ನೌಕರನಾಗಿದ್ದು ಮೋದಿಯವರ ನೇತೃತ್ವ ಜಗದ್ವಿಖ್ಯಾತವಾಗಿದೆ. ವಿದೇಶಗಳಲ್ಲೂ ಅವರ ಕ್ರೇಜ್ ಇದೆ. ದೇಶದ ಹಿರಿಯಮೆಯನ್ನು ಎತ್ತರಿಸಿದ್ದಾರೆ. ಅಂತಹ ನಾಯಕ ನಮ್ಮ ಮನೆ ಹಾದಿಯಲ್ಲಿ ಸಾಗುತ್ತಾರೆಂದರೆ ಅದಕ್ಕಿಂತ ಖುಷಿಯ ವಿಚಾರವೇನು. ಅವರನ್ನು ನೋಡುವುದು, ಅವರಿಗೆ ಹರಸುವುದು ನನ್ನ ಉದ್ದೇಶ. ಹೀಗಾಗಿ ಒಂದು ತಾಸಿನಿಂದ ಕಾಯ್ದಿದ್ದೇನೆ. ನನಗೀಗ 92 ವರ್ಷವಾಗಿದೆ, ಮೋದಿ ನನ್ನ ಉತ್ಸಾಹ ಹೆಚ್ಚಿಸಿದ್ದಾರೆ ಎಂದರು.

    ಇದನ್ನೂ ಓದಿ: ವಿಜಯಪುರ | ಹಾಡಹಗಲೇ ಗುಂಡಿನ ದಾಳಿ; ಸ್ಥಳದಲ್ಲಿಯೇ ಪ್ರಾಣಬಿಟ್ಟ ರೌಡಿಶೀಟರ್

    ನೂರಾರು ಬಜರಂಗಬಲಿ

    ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪವನ್ನು ಮಾಡಿದ್ದಕ್ಕೆ ಕೆರಳಿದ ಬಿಜೆಪಿ ಬಳಗ ಅದನ್ನೇ ತಿರುಗುಬಾಣವಾಗಿಸಿದ ಬಿಜೆಪಿ ಬಜರಂಗ ಬಲಿಗೆ ಜೈಕಾರ ಮೊಳಗಿಸುತ್ತಿದೆ. ಖುದ್ದು ಮೋದಿಯವರೇ ಜೈ ಬಜರಂಗಲಿ ಘೋಷಣೆ ಮೊಳಗಿಸಿದ್ದರು. ಇದೇ ಪ್ರಕಾರ ಶನಿವಾರ ರ‌್ಯಾಲಿಯಲ್ಲಿ ಜಯನಗರ, ಜೆಪಿ ನಗರ, ಬವಸನಗುಡಿಯಲ್ಲಿ ನೂರಾರು ಬಜರಂಗಿ ಅವತಾರಿಗಳು ಕಾಣಿಸಿಕೊಂಡರು. ಬಜರಂಗಬಲಿ ಘೋಷಣೆ ಮೊಳಗಿತು. ನೂರಾರು ಮಂದಿ ಬಜರಂಗಿ ಮುಖವಾಡು ತೊಟ್ಟು ಬಂದಿದ್ದು ಗಮನ ಸೆಳೆಯಿತು. ಸೌತ್ ಎಂಡ್ ಸರ್ಕಲ್ ಬಳಿ 20ಕ್ಕೂ ಹೆಚ್ಚು ಮಂದಿ ಹನುಮಂತ ವೇಷ ತೊಟ್ಟವರು ಕಂಡುಬಂದರು.

    ಚಂದನ್ ಶೆಟ್ಟಿ ಹಾಡಿನ ಅಬ್ಬರ

    ಚುನಾವಣೆ ಪ್ರಚಾರಕ್ಕೆಂದು ರ್ಯಾಪರ್ ಚಂದನ್ ಶೆಟ್ಟಿ ಹಾಡಿರುವ ಹಾಡು ಜನರನ್ನು ಹೆಚ್ಚೆದ್ದು ಕಣಿಯುವಂತೆ ಮಾಡಿತು. ರೋಡ್ ಶೋ ಸಾಗಿಬಂದ ಕಡೆ ಅನೇಕ ಕಡೆ ಚಂದನ್ ಶೆಟ್ಟಿ ಅವರ ಹಾಡನ್ನು ಪ್ರಸಾರ ಮಾಡಿದ್ದು, ಯುವಕರು, ಮಹಿಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.

    ಕುಟುಂಬಗಳ ಹಾಜರಿ

    ಮೋದಿ ನೋಡಲು ಕುಟುಂಬ ಸಮೇತ ಆಗಮಿಸಿದರ ಸಂಖ್ಯೆ ಹೆಚ್ಚಿತ್ತು. ತಮ್ಮ ಮಕ್ಕಳನ್ನು ಜತೆಗೆ ಕರೆತಂದಿದ್ದ ಕುಟುಂಬಗಳು ಗಂಟೆಗಟ್ಟಲೆ ಕಾಯ್ದಿದ್ದಾರೆ. ಮೋದಿ ಆಗಮನವಾಗುತ್ತಿದ್ದಂತೆ ಮಕ್ಕಳನ್ನು ಎತ್ತಿ ಹಿಡಿದ ತೋರಿಸಿ ಖುಷಿಪಟ್ಟರು. ಮತ್ತೆ ಕೆಲವರು ದೂರದಿಂದಲೇ ಮೋದಿ ಜತೆ ತಮ್ಮ ಮಕ್ಕಳ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ್ದೂ ಸಹ ಕಾಣಿಸಿತು.

    ಮೋದಿಯಿಂದಲೇ ಪುಷ್ಪಾರ್ಚನೆ

    ಕೆಲವು ಕಡೆ ಜನರ ಉತ್ಸಾಹ ಕಂಡ ಮೋದಿ ತಮ್ಮತ್ತ ಬಂದಿದ್ದ ಹೂವನ್ನು ಪುನಃ ಜನರ ಮೇಲೆ ಎರಚಿ ಸಂಭ್ರಮಿಸಿದರು. ಮೋದಿ ಮೋದಿ ಘೋಷಣೆಗಳು ಇಡೀ ವಾತಾವರಣ ಕಳೆಗಟ್ಟುವಂತೆ ಮಾಡಿತು. ಅದರಲ್ಲೂ ಮಕ್ಕಳು ಹೆಚ್ಚಿದ್ದ ಕಡೆ ಮೋದಿ ಪುಷ್ಪ ಎರಚಿ ಖುಷಿಪಟ್ಟರು. ಒಂದು ಕಡೆ ತಮ್ಮನ್ನು ನೋಡಲು ಕಾಯ್ದಿದ್ದ ಪೌರಕಾರ್ಮಿಕರಿಗೆ ಪುಷ್ಪ ಎರಚಿ ಕೃತಜ್ಞತೆ ಸಲ್ಲಿಸಿದರು.

    ಇದನ್ನೂ ಓದಿ: ರಾಜಕೀಯ ಭಾಷಣದ ನಡುವೆಯೂ ಎತ್ತಿನಹೊಳೆ, ಭದ್ರಾಮೇಲ್ದಂಡೆ ಪ್ರಸ್ತಾಪಿಸಿದ ಮೋದಿ

    ವಿದೇಶಿ ಅಧಿಕಾರಿಗಳ ತಂಡ

    ಪ್ರಧಾನಿ ರೋಡ್ ಶೋ ನೋಡಲು ವಿದೇಶದ ಅಧಿಕಾರಿಗಳ ತಂಡ ಆಗಮಿಸಿತ್ತು. ಮಾಲ್ಡೀವ್ಸ್, ಭೂತಾನ್, ನೇಪಾಳದ ಹನ್ನೊಂದು ಅಧಿಕಾರಿಗಳು ಸೌತ್ ಎಂಡ್ ವೃತ್ತದ ಬಳಿ ಹಾಜರಿದ್ದು, ರೋಡ್ ಶೋ ವೀಕ್ಷಿಸಿದರು. ಇಲ್ಲಿ ನಡೆಯುವ ಚುನಾವಣೆ ತಯಾರಿ ಹಾಗೂ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳು ಆಗಮಿಸಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರಲ್ಲದೇ ಮೋದಿ ರೋಡ್ ಶೋ ವೀಕ್ಷಿಸಿದರು.

    ಗೆದ್ದು ಬನ್ನಿ

    ಚಾಮರಾಜಪೇಟೆಗೆ ಮೋದಿ ರೋಡ್ ಶೋ ಆಗಮಿಸುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಜನ ಜಯೋಷದೊಂದಿಗೆ ಸ್ವಾಗತಿಸಿದರು. ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮೋದಿಯವರನ್ನು ಬರಮಾಡಿಕೊಂಡರು, ಈ ವೇಳೆ ಮೋದಿಯವರು ಗೆದ್ದು ಬನ್ನಿ ಎಂದು ತಾವಿದ್ದಲ್ಲಿಂದಲೇ ಹರಿಸಿದ್ದರು ವಿಶೇಷವಾಗಿತ್ತು.

    ಅಭ್ಯರ್ಥಿಗಳ ಸಡಗರ

    ಜಯನಗರ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ, ಬಸವನ ಗುಡಿ ಅಭ್ಯರ್ಥಿ ರವಿಸುಬ್ರಹ್ಮಣ್ಯ, ಚಿಕ್ಕಪೇಟೆ ಅಭ್ಯರ್ಥಿ ಉದಯ್ ಗರುಡಾಚಾರ್, ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ ರಾವ್, ವಿಜಯನಗರ ಅಭ್ಯರ್ಥಿ ರವೀಂದ್ರ, ಗೋವಿಂದರಾಜ ನಗರ ಅಭ್ಯರ್ಥಿ ಉಮೇಶ್ ಶೆಟ್ಟಿ, ಮಲ್ಲೇಶ್ವರ ಅಭ್ಯರ್ಥಿ ಅಶ್ವತ್ಥನಾರಾಯಣ ಅವರು ತಮ್ಮ ಕ್ಷೇತ್ರಕ್ಕೆ ಮೋದಿ ರೋಡ್ ಶೋ ಆಗಮಿಸಿದಾಗ ಸ್ವಾಗತಿಸಿದರಲ್ಲದೇ, ಕಾರ್ಯಕರ್ತರೊಂದಿಗೆ ಜನರ ನಡುವೆ ಕಾಣಿಸಿಕೊಂಡು ತಮ್ಮನ್ನು ಆಶೀರ್ವದಿಸುವಂತೆ ಕೋರಿದರು.

    ಬಿಸಿಲಿನ ತಾಪಕ್ಕೆ ಮಹಿಳೆ ಅಸ್ವಸ್ಥ

    ಮೋದಿ ನೋಡಲೆಂದು ಬೆಳಗ್ಗೆಯಿಂದ ಕಾಯ್ದಿದ್ದ ಮಹಿಳೆಯೊಬ್ಬರು ಬಿಸಿಲಿನ ಝಳಕ್ಕೆ ಅಸ್ವಸ್ಥಗೊಂಡ ಪ್ರಸಂಗ ಶಂಕರಮಠ ಸರ್ಕಲ್ ಬಳಿ ನಡೆಯಿತು. ಕೂಡಲೇ ಅಲ್ಲಿದ್ದ ಜನ ಅವರನ್ನು ಉಪಚರಿಸಿ, ಆಸ್ಪತ್ರೆಗೆ ಕರೆದೊಯ್ದರು.

    5 ತಿಂಗಳ ಮಗುವಿನೊಂದಿಗೆ ಆಗಮಿಸಿದ ತಾಯಿ

    ಮೋದಿಯವರ ಬಗ್ಗೆ ವಿಶೇಷ ಅಭಿಮಾನ ಹೊಂದಿದ ತಾಯಿಯೊಬ್ಬರು ಐದು ತಿಂಗಳ ಮಗುವಿನೊಂದಿಗೆ ರೋಡ್ ಶೋಗೆ ಆಗಮಿಸಿದ್ದರು. ಜಯನಗರದಲ್ಲಿ ಮೋದಿ ಬರುವಿಕೆಗಾಗಿ ಆ ತಾಯಿ ಮಗುವಿನೊಂದಿಗೆ ಬಹಳ ಹೊತ್ತು ಕಾಯ್ದಿದ್ದರು. ಮೋದಿ ಆಗಮಿಸುತ್ತಿದ್ದಂತೆ ತಮ್ಮ ಮಗುವಿಗೆ ತೋರಿಸುವ ಪ್ರಯತ್ನವನ್ನೂ ಮಾಡಿದ್ದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts