ಮಕ್ಕಳು, ಅತ್ತೆಯ ಮುಂದೆಯೇ ಗರ್ಭಿಣಿಯ ಅತ್ಯಾಚಾರ ಮಾಡಿದ ಪಾಪಿಗಳು!

rape
Published on

ಭೋಪಾಲ್​: ಅತ್ತೆ ಮತ್ತು ಪುಟಾಣಿ ಮಕ್ಕಳ ಮುಂದೆಯೇ ಗರ್ಭಿಣಿಯ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರದೇಶದ ಬಂದರ್​ಗಢ್​ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತೆಯ ಕುಟುಂಬದ ಮೇಲೂ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ.

ಬಂದರ್​ಗಢ್​ ಗ್ರಾಮದ ನಿವಾಸಿಯಾಗಿರುವ ಬೈಜ್ನಾಥ್​ ಅದೇ ಊರಿನ ದಬಾಂಗ್​ ಪಟೇಲ್​ ಹೆಸರಿನ ಯಜಮಾನನ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಇತ್ತೀಚೆಗೆ ಬೈಜ್ನಾಥ್​ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಆತ ದಬಾಂಗ್​ ಪಟೇಲ್​ನ ಬಳಿ ಹೋಗಿ ರಜೆ ಕೇಳಿದ್ದಾನೆ. ಆದರೆ ಇದರಿಂದ ಸಿಟ್ಟಿಗೆದ್ದ ಆತ ಬೈಜ್ನಾಥ್​ ಮತ್ತು ಆತನ ಸಹೋದರ ಲಖನ್​ ಅಹಿರ್ವಾರ್​ ಮೇಲೆ ಹಲ್ಲೆ ನಡೆಸಿದ್ದಾನೆ. ವಿಪರೀತ ಹಲ್ಲೆಯಿಂದಾಗಿ ಪ್ರಾಣ ಉಳಿಸಿಕೊಳ್ಳಲು ಪರದಾಡಿ ಸಹೊದರರು ಕುಟುಂಬಸ್ಥರನ್ನು ಅಲ್ಲಿಯೇ ಬಿಟ್ಟು ಊರು ಬಿಟ್ಟು ತೆರಳಿದ್ದಾರೆ.

ಸಹೋದರರು ಊರು ಬಿಟ್ಟಿರುವುದರಿಂದಾಗಿ ದಬಾಂಗ್​ ಪಟೇಲ್​ ಇನ್ನಷ್ಟು ಕೋಪಗೊಂಡಿದ್ದಾನೆ. ಆತನ ಮನೆಗೆ ರೌಡಿಗಳನ್ನು ಕಳುಹಿಸಿದ್ದಾನೆ. ಆ ರೌಡಿಗಳು ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಗರ್ಭಿಣಿಯಾಗಿದ್ದ ಮಹಿಳೆಯ ಮೇಲೆ ಆಕೆಯ ಮಕ್ಕಳು ಮತ್ತು ಅತ್ತೆಯ ಸಮ್ಮುಖದಲ್ಲೇ ಅತ್ಯಾಚಾರವೆಸಗಿದ್ದಾರೆ. ನಂತರ ಅವರನ್ನೆಲ್ಲ ಕರೆದುಕೊಂಡು ಬಂದು ಮನೆಯ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಈ ವಿಚಾರ ಹೊರಗೆ ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಆದರೆ ಕಟುಕರ ಕಣ್ತಪ್ಪಿಸಿಕೊಂಡು ಬಂದ ಸಂತ್ರಸ್ತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆದಷ್ಟು ಬೇಗ ಆರೋಪಿಗಳನ್ನು ಹಿಡಿಯುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net