

ಮುಂಬೈ: ಅತ್ತೆ ಸೊಸೆ ಅನ್ಯೋನ್ಯವಾಗಿರುವುದು ಎಲ್ಲೋ ಕೆಲ ಮನೆಗಳಲ್ಲಿ ಮಾತ್ರ. ಅದೇ ರೀತಿ ಸದಾ ಕಿತ್ತಾಡುತ್ತಿದ್ದ ಅತ್ತೆ ಸೊಸೆಯ ಮಧ್ಯೆ ಆಗಬಾರದ್ದೊಂದು ಕೃತ್ಯವಾಗಿರುವುದು ಬೆಳಕಿಗೆ ಬಂದಿದೆ. ಒಂದು ಪೊದೆಯಿಂದಾಗಿ ಸತ್ಯಾಂಶ ಹೊರಬಿದ್ದಿದೆ.
ಮಹಾರಾಷ್ಟ್ರದ ಪುಣೆ ನಿವಾಸಿ ಬೇಬಿ ಗೌತಮ್ ಶಿಂಧೆ(50) ಸದಾ ತನ್ನ ಸೊಸೆ ಪೂಜಾ ಮಿಲಿಂದ್ ಶಿಂಧೆ (22) ಜತೆ ಜಗಳವಾಡುತ್ತಿರುತ್ತಿದ್ದಳಂತೆ. ಅದೇ ರೀತಿಯ ಜಗಳ ಮೇ 21ರಂದೂ ನಡೆದಿದೆ. ಜಗಳ ತಾರಕಕ್ಕೇರಿದ್ದು, ಪೂಜಾ ಸಿಟ್ಟಿನಿಂದ ಅತ್ತೆಯನ್ನು ಕೊಲೆ ಮಾಡಿದ್ದಾಳೆ. ಅತ್ತೆಯ ಕುಪ್ಪಸದಿಂದ ಆಕೆಯ ಕತ್ತನ್ನೇ ಹಿಸುಕಿ ಕೊಲೆ ಮಾಡಿದ್ದಾಳೆ. ಅದಾದ ಮೇಲೆ ಮನೆಗೆ ಬಂದ ಗಂಡ ಮಿಲಿಂದ್ ಶಿಂಧೆ(29)ಗೂ ನಡೆದ ವಿಚಾರ ತಿಳಿಸಿದ್ದಾಳೆ.
ಗಂಡ ಹೆಂಡತಿ ಇಬ್ಬರೂ ಸೇರಿಕೊಂಡು ಬೇಬಿಯ ಮೃತದೇಹವನ್ನು ಚೀಲವೊಂದಕ್ಕೆ ತುಂಬಿ ಮನೆಯ ಟೆರೇಸ್ ಮೇಲೆ ಇಟ್ಟುಬಂದಿದ್ದಾರೆ. ಎರಡು ದಿನಗಳಲ್ಲಿ ಶವದಿಂದ ಕೆಟ್ಟ ವಾಸನೆ ಬರಲಾರಂಭಿಸಿದ್ದು, ಅಕ್ಕ ಪಕ್ಕದವರು ಅನುಮಾನ ದೃಷ್ಟಿಯಿಂದ ನೋಡಲಾರಂಭಿಸಿದ್ದಾರೆ. ಅದಕ್ಕಾಗಿ ದಂಪತಿ ಆ ಚೀಲವನ್ನು ಎತ್ತಿಕೊಂಡು ಮನೆಗೆ ಸ್ವಲ್ಪ ದೂರಕ್ಕೆ ತೆರಳಿ ಅಲ್ಲಿದ್ದ ಪೊದೆಯಲ್ಲಿ ಮುಚ್ಚಿಟ್ಟಿದ್ದಾರೆ. ಪೊದೆಯಲ್ಲಿ ಶವ ಎಸೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಷ್ಟರಲ್ಲಾಗಲೇ ಅಕ್ಕ ಪಕ್ಕದ ಮನೆಯವರು ಪೊಲೀಸರೆದುರು ಶಂಕೆ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಅವರಿಗೆ ಸಿಕ್ಕಿದ್ದು ಅದರಲ್ಲಿ ದಂಪತಿಯ ಕೃತ್ಯ ಬಯಲಾಗಿದೆ. ಪೂಜಾ ಕೊಲೆ ಮಾಡಿದ್ದರೆ, ಮಿಲಿಂಧ್ ರಕ್ತದ ಕಲೆಯನ್ನೆಲ್ಲ ಒರೆಸಿ ಅದನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದ ಎನ್ನಲಾಗಿದೆ. ಇದೀಗ ದಂಪತಿ ಪೊಲೀಸರ ಅತಿಥಿಯಾಗಿದ್ದಾರೆ. (ಏಜೆನ್ಸೀಸ್)