ಕೊರಳಿಗೆ ಹಾರ ಹಾಕುತ್ತಿದ್ದಂತೆಯೇ ಪ್ರಾಣ ಬಿಟ್ಟ ವಧು! ಅಕ್ಕನ ಹೆಣವನ್ನು ರೂಮಿನಲ್ಲಿ ಮಲಗಿಸಿ ತಂಗಿಯ ಮದುವೆ!

marriage
ಮಂಜೇಶ ಮತ್ತು ಸುರಭಿ
Published on

ಲಖನೌ: ಮದುವೆ ವೇದಿಕೆ ಮೇಲಿದ್ದ ವಧು ಇನ್ನೇನು ಸಪ್ತಪದಿ ತುಳಿದು ನಂತರ ಗಂಡನ ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದಾದ ನಂತರ ಅದೇ ಮಂಟಪದಲ್ಲಿ ವಧುವಿನ ತಂಗಿಯನ್ನೇ ವರ ಮದುವೆಯಾಗಿ ಕರೆದುಕೊಂಡು ಹೋಗಿರುವುದಾಗಿ ಹೇಳಲಾಗಿದೆ.

ಉತ್ತರಪ್ರದೇಶದ ಸಮಸ್ಪುರ ಹೆಸರಿನ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸುರಭಿ ಹೆಸರಿನ ಯುವತಿಗೆ ಮಂಜೇಶ ಹೆಸರಿನ ಯುವಕನೊಂದಿಗೆ ಮೇ 25ಕ್ಕೆ ಮದುವೆ ನಡೆಯುವುದಿತ್ತು. ಆ ದಿನ ರಾತ್ರಿ ಮುಹೂರ್ತವಿದ್ದಿದ್ದರಿಂದ ವರನ ಕಡೆಯ ದಿಬ್ಬಣ ವಧುವಿನ ಮನೆಗೆ ಸೇರಿತ್ತು. ವಧು ವರರಿಬ್ಬರೂ ವೇದಿಕೆಯನ್ನು ಹತ್ತಿ ವರಮಾಲೆಯನ್ನೂ ಬದಲಾಯಿಸಿಕೊಂಡಿದ್ದರು. ಅವರಿಬ್ಬರು ಇನ್ನೇನು ಸಪ್ತಪದಿ ತುಳಿಯುಬೇಕು ಎನ್ನುವಷ್ಟರಲ್ಲಿ ಸುರಭಿ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.

ತಕ್ಷಣ ಕುಟುಂಬಸ್ಥರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಅದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯನ್ನು ವಾಪಾಸು ಮನೆಗೆ ಕರೆದುಕೊಂಡು ಬರಲಾಗಿದೆ. ಕುಟುಂಬಸ್ಥರು ಒಪ್ಪಿ ಆಕೆಯ ತಂಗಿಯನ್ನು ಮಂಜೇಶನಿಗೆ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ.

ಸುರಭಿಯ ಮೃತದೇಹವನ್ನು ಮನೆಯ ಕೋಣೆಯಲ್ಲಿ ಮಲಗಿಸಿ, ಮದುವೆ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ. ಶಾಸ್ತ್ರೋಸ್ತ್ರವಾಗಿ ಮದುವೆ ಮಾಡಿ ಮೃತಳ ತಂಗಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ನಂತರ ಆಕೆಯ ಅಂತ್ಯಸಂಸ್ಕಾರ ಮಾಡಲಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net