

ಲಖನೌ: ದೇಶದಾದ್ಯಂತ ಕರೊನಾ ಸೋಂಕಿನ ಅಬ್ಬರ ಹೆಚ್ಚಿದ್ದು, ಸೋಂಕಿತರಿಗೆ ಆ್ಯಂಬುಲೆನ್ಸ್ ಸೇವೆ ಕಲ್ಪಿಸುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ. ಹೀಗಿರುವಾಗ ಯುವಕರ ಗುಂಪೊಂದು ಆ್ಯಂಬುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಂಡು ಸಿಕ್ಕಿಹಾಕಿಕೊಂಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ವಾರಾಣಸಿಯ ರಾಮನಗರ ಏರಿಯಾದಲ್ಲಿ ನಿರ್ಜನ ಪ್ರದೇಶವೊಂದರಲ್ಲಿ ಆ್ಯಂಬುಲೆನ್ಸ್ ನಿಂತಿತ್ತು. ಸುಮಾರು ಗಂಟೆಗಳಾದರೂ ಆ್ಯಂಬುಲೆನ್ಸ್ ಅಲ್ಲಿಯೇ ನಿಂತಿದ್ದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ್ಯಂಬುಲೆನ್ಸ್ ಬಳಿ ಹೋಗಿ ನೋಡಿದಾಗ ಅವರಿಗೆ ಶಾಕ್ ಆಗಿದೆ.
ಮೂವರು ಯುವಕರು ಮತ್ತು ಓರ್ವ ಯುವತಿ ಆ್ಯಂಬುಲೆನ್ಸ್ನೊಳಗೆ ಮಜಾ ಮಾಡುತ್ತಾ ಕುಳಿತಿದ್ದಾಗಿ ಹೇಳಲಾಗಿದೆ. ತಕ್ಷಣ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಆ್ಯಂಬುಲೆನ್ಸ್ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿರುವ ಆ್ಯಂಬುಲೆನ್ಸ್ ಆಗಿದ್ದು, ಅದನ್ನು ಯುವಕನೋರ್ವನಿಗೆ ಆಸ್ಪತ್ರೆ ಬಾಡಿಗೆಗೆ ಕೊಟ್ಟಿದ್ದಾಗಿ ಹೇಳಲಾಗಿದೆ. ಈ ಹಿಂದೆಯೂ ಈ ರೀತಿಯ ದೂರು ಕೇಳಿಬಂದಿತ್ತು ಎನ್ನಲಾಗಿದೆ. (ಏಜೆನ್ಸೀಸ್)