

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಎರಡನೇ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ, ಸಿದ್ದರಾಮಯ್ಯ ಅವರ ಮಂತ್ರಿ ಮಂಡಲದಲ್ಲಿ ಯಾರೆಲ್ಲಾ ಶಾಸಕರು ಸಚಿವರಾಗಿ ಭಡ್ತಿ ಹೊಂದಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಯಾರಾಗಬೇಕು ಎಂಬ ಬಿಕ್ಕಟ್ಟು ಬಗೆ ಹರಿಯುತ್ತಿದ್ದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ನ ಕೆಲ ಪ್ರಮುಖ ನಾಯಕರು ನೂತನ ಸಚಿವರ ಪಟ್ಟಿ ಸಿದ್ದಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯನ್ನು ಗುರಿಯಾಗಿಸಿಕೊಂಡು ಸಮರ್ಥವಾದ ಸಂಪುಟ ರಚನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಹಾಗೆಯೇ ಯಾವುದೇ ಸಮುದಾಯಕ್ಕೂ ಅಸಮಾಧಾನ ಉಂಟಾಗದಂತೆ ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಜತೆಗೆ ಯುವ ಶಾಸಕರನ್ನೂ ಸಚಿವ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.