

ನವದೆಹಲಿ: 20 ವರ್ಷದ ಬಾಲಕನೊಬ್ಬ ತಾನು ಕಾರ್ಟೂನ್ ಮತ್ತು ಸಿನಿಮಾಗಳಲ್ಲಿ ಬರುವ ಸ್ಪೈಡರ್ಮ್ಯಾನ್ ಪಾತ್ರವನ್ನು ನೈಜವಾಗಿ ಅನುಭವಿಸುವ ಸಲುವಾಗಿ ಥೇಟ್ ಅದೇ ರೀತಿ ವೇಷ ಧರಿಸಿ, ನಡುರಸ್ತೆಯಲ್ಲಿ ಹುಚ್ಚಾಟ ಪ್ರದರ್ಶಿಸಲು ಹೋಗಿ ಇದೀಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ. ಆತಂಕ ಮೂಡಿಸುವ ಭಯಾನಕ ಸ್ಟಂಟ್ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಸ್ಪೈಡರ್ಮ್ಯಾನ್, ಬ್ಯಾಟ್ಮ್ಯಾನ್ ಹೀಗೆ ಸೂಪರ್ಹೀರೋ ಸಿನಿಮಾಗಳನ್ನು ನೋಡಿ ಅದರಿಂದ ಪ್ರಭಾವಿತರಾಗಿ ಕೆಲವರು ನಾವು ಕೂಡ ಸೂಪರ್ ಹೀರೋಗಳು ಎಂದೇ ಭಾವಿಸಿ, ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆಗಳು ಈ ಹಿಂದೆ ಸಾಕಷ್ಟು ವರದಿಯಾಗಿವೆ. ಅದನ್ನೆಲ್ಲಾ ಮಾಧ್ಯಮಗಳಲ್ಲಿ ನಾವು ಕಂಡಿದ್ದೇವೆ. ಇದೇ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದ್ದು, ಅದೃಷ್ಟವಶಾತ್ ಬಾಲಕ ಸಾವಿನಿಂದ ಪಾರಾಗಿದ್ದಾನೆ. ದೆಹಲಿಯ ಮುಖ್ಯ ರಸ್ತೆಯಲ್ಲಿ ತನ್ನ ಸ್ನೇಹಿತನಿಗೆ ಕಾರನ್ನು ವೇಗವಾಗಿ ಚಲಾಯಿಸಲು ಹೇಳಿ, ತಾನು ಸ್ಪೈಡರ್ಮ್ಯಾನ್ ಉಡುಗೆ ತೊಟ್ಟು ಕಾರಿನ ಬಾನೆಟ್ ಮೇಲೆ ಕುಳಿತು ದುಸ್ಸಾಹಸ ಪ್ರದರ್ಶಿಸಿದ್ದಾನೆ.
ದೂರು ಪಡೆಯುತ್ತಿದ್ದಂತೆ ದೆಹಲಿ ಪೊಲೀಸರು ಬಾಲಕರನ್ನು ದ್ವಾರಕ ನಗರದ ಸರ್ಕಲ್ನಲ್ಲಿ ಸೆರೆಹಿಡಿದಿದ್ದು, ತಪ್ಪಿಸಿಕೊಂಡು ಓಡದಂತೆ ಲಾಕ್ ಮಾಡಿದ್ದಾರೆ. ಕಾರು ಚಲಾಯಿಸುತ್ತಿದ್ದ 19 ವರ್ಷದ ಬಾಲಕ ಮತ್ತು ಸ್ಪೈಡರ್ಮ್ಯಾನ್ ರೀತಿ ಡ್ರೆಸ್ ಮಾಡಿಕೊಂಡಿದ್ದ 20 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಅಪಾಯಕಾರಿ ಚಾಲನೆ ಹಾಗೂ ಇತರೆ ನಿಯಮ ಉಲ್ಲಂಘನೆಗಾಗಿ ಪೊಲೀಸರು ಬಾಲಕರಿಗೆ 26,000 ರೂ. ದಂಡ ವಿಧಿಸಿದ್ದಾರೆ. ಸದ್ಯ ಘಟನೆಯ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ದಾವಣಗೆರೆ ಸ್ಮಾರ್ಟ್ಸಿಟಿ ಸಾಧನೆಗೆ ಮತ್ತೊಂದು ಗರಿ
ಅಪಾಯಕಾರಿ ಚಾಲನೆ, ಮಾಲಿನ್ಯ ಪ್ರಮಾಣಪತ್ರವಿಲ್ಲದೆ ಡ್ರೈವಿಂಗ್ ಮತ್ತು ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಲಾಗಿದ್ದು, 26,000 ರೂ. ದಂಡ ಅಥವಾ ಜೈಲು ಶಿಕ್ಷೆಯನ್ನು ಕಾರಿನ ಮಾಲೀಕರು ಮತ್ತು ಚಾಲಕ ಇಬ್ಬರಿಗೂ ವಿಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).