

ಚೆನ್ನೈ: ಪ್ರಧಾನಿ ಮೋದಿ ಸಹೋದರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರನ್ನು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ಮೋದಿಗೆ ಐವರು ಒಡಹುಟ್ಟಿದವರಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಪ್ರಹ್ಲಾದ್ ಮೋದಿ ಅವರಿಗಿಂತ ಚಿಕ್ಕವರು. ಪ್ರಹ್ಲಾದ್ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಅದಲ್ಲದೇ ಟೈರ್ ಶೋರೂಮ್ ಕೂಡ ಹೊಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್ 27 ರಂದು ಮೈಸೂರು ಜಿಲ್ಲೆಯ ಬಳಿ ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು.
ಪ್ರಹ್ಲಾದ್ ಮೋದಿ ಮತ್ತು ಅವರ ಕುಟುಂಬ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಪ್ರವಾಸಿ ತಾಣ ಬಂಡೀಪುರ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
70 ವರ್ಷದ ಪ್ರಹ್ಲಾದ್ ಮೋದಿ ಅವರ ಗಲ್ಲದ ಮೇಲೆ ಗಾಯವಾಗಿತ್ತು. ಅವರ ಮಗ ಮೆಹುಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿನಾಲ್ ಮೋದಿ ಮತ್ತು 6 ವರ್ಷದ ಮೊಮ್ಮಗ ಮೆನತ್ ಮೆಹುಲ್ ಮೋದಿ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಆರೋಪಿ ಚಾಲಕ ಸತ್ಯನಾರಾಯಣ ಎಂಬುವರಿಗೂ ಗಾಯಗಳಾಗಿವೆ. ಸತ್ಯನಾರಾಯಣ ಅವರ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಪ್ರಧಾನಿ ಮೋದಿಗೆ ಒಬ್ಬ ಸಹೋದರಿ ಮತ್ತು ನಾಲ್ವರು ಸಹೋದರರಿದ್ದಾರೆ. ಸೋಮ ಮೋದಿ, ಅಮೃತ್ ಮೋದಿ, ಪಂಕಜ್ ಮೋದಿ, ಪ್ರಹ್ಲಾದ್ ಮೋದಿ ಮತ್ತು ಸಹೋದರಿ ವಸಂತಿ ಮೋದಿ. ಸೋಮ ಮೋದಿ ಅವರು ಆರೋಗ್ಯ ಇಲಾಖೆಯಿಂದ ನಿವೃತ್ತರಾಗಿರುವ ಪ್ರಧಾನಿಯವರ ಹಿರಿಯ ಸಹೋದರ. ಪ್ರಸ್ತುತ, ಸೋಮ ಮೋದಿ ಅಹಮದಾಬಾದ್‌ನಲ್ಲಿ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್)