

ಬನವಾಸಿ: ಬನವಾಸಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಎದುರು ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದ ಘಟನೆ ಮಂಗಳವಾರ ನಡೆಯಿತು.
ಸರ್ಕಾರಿ ಕದಂಬೋತ್ಸವವನ್ನು ಬಿಜೆಪಿ ಉತ್ಸವದಂತೆ ನಡೆಸಲಾಗುತ್ತಿದೆ. ಬಿಜೆಪಿ ಚಿಹ್ನೆಯ ಟಿಶರ್ಟ್ ಹಂಚಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು ತಾವು ಕಾಂಗ್ರೆಸ್ ಶಾಲು ಹಾಕಿ ಬಂದಿದ್ದರು. ಈ ವಿಚಾರವನ್ನು ವಿರೋಧಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿಎಂ ತೆರಳುವ ಮಾರ್ಗದಲ್ಲಿ ಗುಂಪಾಗಿ ನಿಂತು ಘೋಷಣೆ ಕೂಗಿದರು.
ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದೆ. ಅದನ್ನು ತಮ್ಮ ಕಾರ್ಯಕ್ರಮದಂತೆ ಸಚಿವ ಶಿವರಾಮ ಹೆಬ್ಬಾರ ಬಿಂಬಿಸುತ್ತಾರೆ ಎಂದು ಆರೋಪಿಸಿದರು.
ಎಎಸ್ ಪಿ ಜಯಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾಂಗ್ರೆಸ್ ನಾಯಕ ವಿ.ಎಸ್.ಪಾಟೀಲ ಹಾಗೂ ಶ್ರೀನಿವಾಸ ಭಟ್ ಧಾತ್ರಿ ಅವರನ್ನು ಬಂಧಿಸಿದರು.