ಸರ್ಕಾರಿ ನೌಕರರ ಮೇಲೆ ಎಸ್ಮಾ ಜಾರಿ ಮಾಡುವ ಪರಿಸ್ಥಿತಿ ಎದುರಾಗುವುದಿಲ್ಲ; ಸಿಎಂ ಬೊಮ್ಮಾಯಿ

Govt Employ
Published on

ಉತ್ತರ ಕನ್ನಡ: ಸರ್ಕಾರಿ ನೌಕರರ ಸಂಘದಿಂದ ಪದಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಸಂಜೆ ಆಯೋಗದ ಜತೆ ಮಾತನಾಡುತ್ತೇನೆ. ಮದ್ಯಂತರ ವರದಿ ತರಿಸಿಕೊಂಡು ಜಾರಿಗೆ ಕ್ರಮ ವಹಿಸಿದ್ದೇನೆ. ಬಜೆಟ್​ನಲ್ಲಿ ಅದಕ್ಕಾಗಿ ಹಣ ತೆಗೆದಿರಿಸಿದ್ದೇನೆ. ಎಸ್ಮಾ ಜಾರಿ ಮಾಡುವ ಪರಿಸ್ಥಿತಿ ಬರುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಏಳನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ನಾಳೆಯಿಂದ ಮುಷ್ಕರ ನಡೆಸಲು ಸರ್ಕಾರಿ ನೌಕರರು ಮುಂದಾಗಿದ್ದಾರೆ. ಸದ್ಯ ಸರ್ಕಾರಿ ನೌಕರರ ಸಂಘದಿಂದ ಮುಷ್ಕರದಲ್ಲಿ ಭಾಗವಹಿಸಲು‌ ಕರೆ ನೀಡಿದ್ದು, ಭವಿಷ್ಯದ ಬದುಕಿಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ ಎಂದು ಬರೆದಿರುವ ಕರಪತ್ರ ಅಂಟಿಸಿ ಬೆಂಬಲ ಸೂಚಿಸಲು ಕರೆ ನೀಡಲಾಗಿದೆ.

ಸದ್ಯ ಮುಷ್ಕರ ಕೈಬಿಡುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮನವಿ ಮಾಡಿದ್ದು, ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಿಎಂ ಬೊಮ್ಮಾಯಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಒಪ್ಪದ ಸರ್ಕಾರಿ ನೌಕರರು, ಆದೇಶ ಜಾರಿಯಾಗುವ ತನಕ ಧರಣಿ ಮುಷ್ಕರ ಹೂಡುವುದಾಗಿ ಹೇಳಿಕೊಂಡಿದ್ದಾರೆ.

ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಎಸ್ಮಾ ಜಾರಿಗೊಳಿಸಿ, ಅಮಾನತು ಮಾಡಿದರೂ ನಾವು ಹೆದರುವುದಿಲ್ಲ. ಎಲ್ಲಾ ತ್ಯಾಗಕ್ಕೂ ಸಿದ್ಧರಿದ್ದೇವೆ. ವೇತನ ಆಯೋಗದ ಅಧ್ಯಕ್ಷರನ್ನು ನಿನ್ನೆ ಭೇಟಿ ಆಗಿದ್ದೆ. ಆದರೆ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ನಿರ್ದೇಶನ ಬಂದಿಲ್ಲ ಎಂದಿದ್ದಾರೆ. ಮೂರು ದಿನ ಸಾಕು ವರದಿ ತೆಗೆದುಕೊಳ್ಳಲು. ಆದರೆ ವೇತನ ಆಯೋಗ ಜಾರಿ ಮಾಡಲು ಸರ್ಕಾರಕ್ಕೆ ಮನಸ್ಸಿಲ್ಲ. ಹೀಗಾಗಿ ಮುಷ್ಕರ ಮುಂದುವರೆಸುತ್ತೇವೆ. ಆರೋಗ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತವಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net