

ನವದೆಹಲಿ: ರಂಗು ರಂಗಿನ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಮುಕ್ತಾಯಗೊಂಡಿದ್ದು, 17ನೇ ಆವೃತ್ತಿಯ ಟೂರ್ನಿಯು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಹಾಗೆ ನೋಡಿದರೆ ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿಯನ್ನು ನಿರಂತರವಾಗಿ ಟೀಕಿಸಿ ಸುದ್ದಿಯಾಗಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಈಗ ಮತ್ತೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಅದು ಕೂಡ ಮಾಜಿ ಕ್ರಿಕೆಟಿಗ ಮಾಡಿರುವ ಮನವಿ ಮೇರೆಗೆ.
ಐಪಿಎಲ್ ಆರಂಭವಾದಾಗಿನಿಂದಲೂ ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಕುರಿತು ನಿರಂತರವಾಗಿ ಟೀಕಿಸುತ್ತ ಅಂಬಾಟಿ ರಾಯುಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಲ್ಲದೆ ಲೈವ್ನಲ್ಲೇ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅಂಬಾಟಿ ರಾಯುಡುರನ್ನು ಟ್ರೋಲ್ ಮಾಡದಂತೆ ಮನವಿ ಮಾಡಿದ್ದಾರೆ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಆಟಗಾರರ ವಿರುದ್ಧ ಮೊದಲು ಇದನ್ನು ನಿಲ್ಲಿಸಬೇಕು. ಫೈನಲ್ನಲ್ಲಿ ನಾನು ಹಾಗೂ ಅಂಬಾಟಿ ನಡುವಿನ ಮಾತುಕತೆಯೂ ದೊಡ್ಡ ಟ್ರೋಲ್ ಆಗಿ ಮಾರ್ಪಟ್ಟಿದ್ದು, ದಯವಿಟ್ಟು ಇದನ್ನು ಮೊದಲು ನಿಲ್ಲಿಸಿ ಎಂದು ವಿನಂತಿಸಿದ್ದಾರೆ.
ಪಂದ್ಯ ಶುರುವಾಗುವುದಕ್ಕೂ ಮುನ್ನ ಅಂಬಾಟಿ ರಾಯುಡು ತಾವು ಎಸ್ಆರ್ಎಚ್ ತಂಡವನ್ನು ಬೆಂಬಲಿಸುತ್ತಿರುವುದಾಗಿ ಹೇಳಿದ್ದರು. ಕೆವಿನ್ ಪೀಟರ್ಸನ್ ಕೆಕೆಆರ್ ಬೆಂಬಲಿಸುತ್ತಿರುವುದಾಗಿ ಹೇಳಿದರು. ಮಾತನಾಡುವ ವೇಳೆ ರಾಯುಡು ಕೊಹ್ಲಿಯನ್ನು ಟೀಕಿಸಲು ಶುರು ಮಾಡಿದರು. ಈ ವೇಳೆ ಇದಕ್ಕೆ ನಗುತ್ತಲೇ ಉತ್ತರಿಸಿದ ಕೆವಿನ್ ರಾಯುಡುರನ್ನು ಜೋಕರ್ ಎಂದು ಕರೆದಿದ್ದರು. ಇದು ವ್ಯಾಪಕ ಟ್ರೋಲ್ ಆಗಿತ್ತು.
ಪಂದ್ಯ ಮುಗಿದ ಬಳಿಕ ತಾವು ಎರಡು ತಂಡಗಳನ್ನು ಬೆಂಬಲಿಸುತ್ತಿರುವುದಾಗಿ ಹೇಳಿದ ರಾಯುಡು ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪೀಟರ್ಸನ್ ಟ್ರೋಲ್ ಮಾಡದಂತೆ ಮನವಿ ಮಾಡಿದ್ದಾರೆ.