ಕೋಟಿ ಖರ್ಚು ಮಾಡಿದರೂ ಭೇಟಿ ನೀಡಲಾಗದ ಭಾರತದ ಸ್ಥಳಗಳಿವು... ಇಲ್ಲಿದೆ ಸಂಪೂರ್ಣ ವಿವರ! India

India
Published on

India : ಭಾರತವು ವಿವಿಧ ಭಾಷೆಗಳು, ಪಾಕಪದ್ಧತಿ, ಬಟ್ಟೆ, ಧರ್ಮ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ವೈವಿಧ್ಯಮಯ ಜನರಿಗೆ ಅತ್ಯುತ್ತಮ ನೆಲೆಯಾಗಿದೆ. ವಿವಿಧತೆಯಲ್ಲಿ ಏಕತೆ ಕಾಣುವುದೇ ಭಾರತದ ವಿಶೇಷ. ಜಗತ್ತಿನಲ್ಲೇ ಶಾಂತಿಧೂತ ಎನಿಸಿಕೊಂಡಿರುವ ಭಾರತ ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ನೆಚ್ಚಿನ ದೇಶಗಳಲ್ಲಿ ಒಂದಾಗಿದೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ಅನೇಕ ಸ್ಥಳಗಳು ತನ್ನ ನೈಸರ್ಗಿಕ ಸಂಪನ್ಮೂಲಗಳಿಂದಲೇ ಪ್ರವಾಸಿಗರನ್ನು ತನ್ನ ಸೆಳೆಯುತ್ತದೆ. ಈ ಆಧುನಿಕ ಭಾರತದಲ್ಲಿ ಭೇಟಿ ನೀಡಲು ಸಾಕಷ್ಟು ಸ್ಥಳಗಳಿದ್ದರು ಕೂಡ ಕೆಲವೊಂದು ಪ್ರದೇಶಗಳು ಇನ್ನೂ ಕೂಡ ಪ್ರವಾಸಿಗರ ಕೈಗೆ ಎಟುಕುತ್ತಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಆ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆ ಪ್ರದೇಶಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಪ್ಯಾಂಗೊಂಗ್ ತ್ಸೋ ಸರೋವರ

ಪಾಂಗೊಂಗ್ ತ್ಸೋ ಸರೋವರವು ಜಮ್ಮು ಮತ್ತು ಕಾಶ್ಮೀರ, ಲೇಹ್ ಮತ್ತು ಲಡಾಖ್‌ನಿಂದ ಚೀನಾದ ಗಡಿಯವರೆಗೆ ವಿಸ್ತರಿಸಿರುವ ವಿಶಾಲವಾದ ಸರೋವರವಾಗಿದೆ. ಈ ಸರೋವರದ ಕೆಲವು ಭಾಗಗಳು ಚೀನಾದ ಗಡಿಗೆ ಹತ್ತಿರವಾಗಿರುವುದರಿಂದ ಭದ್ರತಾ ಕಾರಣಗಳಿಂದ ಪ್ರವಾಸಿಗರಿಗೆ ಮುಚ್ಚಲಾಗಿದೆ.

ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC)

ಬಾಬಾ ಪರಮಾಣು ಸಂಶೋಧನಾ ಕೇಂದ್ರವು ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿದೆ. ದೇಶದ ಪ್ರಧಾನ ಮಂತ್ರಿಗಳೇ ನೇರವಾಗಿ ಈ ಕೇಂದ್ರ ಮೇಲ್ವಿಚಾರಣೆ ಮಾಡುತ್ತಾರೆ. ಇದು ಬಹಳ ಸೂಕ್ಷ್ಮ ಸ್ಥಳವಾಗಿರುವುದರಿಂದ ಸಾರ್ವಜನಿಕರಿಗೆ ಇಲ್ಲಿ ಯಾವುದೇ ಕಾರಣಕ್ಕೂ ಪ್ರವೇಶ ಇರುವುದಿಲ್ಲ. ಇದು ವಿವಿಧ ಪರಮಾಣು ವಿದ್ಯುತ್ ಸ್ಥಾವರಗಳಿಗೆ ನೆಲೆಯಾಗಿದೆ ಮತ್ತು ಸಂಶೋಧನೆಗೆ ಬಳಸಲಾಗುತ್ತಿದೆ. ಭವಿಷ್ಯಕ್ಕೆ ಬೇಕಾದ ಆಧುನಿಕ ಪರಮಾಣು ಶಕ್ತಿ ವ್ಯವಸ್ಥೆಗಳು, ಕೈಗಾರಿಕೆಗಳಿಗೆ ಅಗತ್ಯವಿರುವ ವಿದ್ಯುತ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಇಲ್ಲಿ ನಿರಂತವಾಗಿ ಸಂಶೋಧನೆ ನಡೆಸಲಾಗುತ್ತಿದೆ. ಈ ಕಾರಣದಿಂದಾಗಿ, ಈ ಸ್ಥಳವನ್ನು ತುಂಬಾ ಜಾಗರೂಕತೆಯಿಂದ ರಕ್ಷಿಸಲಾಗುತ್ತಿದೆ. ಹೊರಗಿನಿಂದ ಬರುವ ಪ್ರವಾಸಿಗರನ್ನು ಇಲ್ಲಿ ನಿಷೇಧಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳನ್ನು ಮಾತ್ರ ಒಳಗೆ ಬಿಡಲಾಗುತ್ತದೆ.

ಉತ್ತರ ಸೆಂಟಿನೆಲ್ ದ್ವೀಪ

ಉತ್ತರ ಸೆಂಟಿನೆಲ್ ದ್ವೀಪವು ಭಾರತದ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 60 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ದ್ವೀಪವನ್ನು ಸೆಂಟಿನೆಲೀಸ್ ಎಂದು ಕರೆಯಲಾಗುತ್ತದೆ. ಇಲ್ಲಿ ವಾಸಿಸುತ್ತಿರುವ ಜನರು ಟಿವಿ, ಸೆಲ್ ಫೋನ್‌ಗಳು ಅಥವಾ ವಿದ್ಯುತ್‌ನಂತಹ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂವಹನವಿಲ್ಲದೆ ಪ್ರತ್ಯೇಕವಾಗಿ ವಾಸಿಸುತ್ತಾರೆ. ಅಲ್ಲಿನ ಸ್ಥಳೀಯ ಜನರನ್ನು ರಕ್ಷಿಸಲು ಮತ್ತು ಹೊರಗಿನ ಪ್ರಪಂಚದಿಂದ ಸೋಂಕು ತಗುಲುವುದನ್ನು ತಡೆಯಲು ಉತ್ತರ ಸೆಂಟಿನೆಲ್ ದ್ವೀಪಕ್ಕೆ ಪ್ರಯಾಣಿಸುವುದನ್ನು ಭಾರತ ಸರ್ಕಾರ ನಿಷೇಧಿಸಿದೆ.

ಸ್ಟಾಕ್ ಕಂಗ್ರಿ, ಲಡಾಖ್

ಲಡಾಖ್‌ನ ಅತ್ಯಂತ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾದ ಹೆಮಿಸ್ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿರುವ ಸ್ಟೋಕ್ ಕಂಗ್ರಿ ಶಿಖರವು ಅತಿ ಹೆಚ್ಚು ಪ್ರವಾಸಿಗರ ಕಾರಣದಿಂದಾಗಿ ಮುಚ್ಚಲ್ಪಟ್ಟಿರುವ ಭಾರತದ ಅತಿ ಎತ್ತರದ ಚಾರಣ ಶಿಖರಗಳಲ್ಲಿ ಒಂದಾಗಿದೆ. 2019ರ ಡಿಸೆಂಬರ್ ತಿಂಗಳಲ್ಲಿ ಆಲ್ ಲಡಾಖ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ ಟ್ರೆಕ್ಕಿಂಗ್ ಮತ್ತು ಕ್ಲೈಂಬಿಂಗ್‌ಗಾಗಿ ಸ್ಟಾಕ್ ಕಂಗ್ರಿಯನ್ನು ಮುಚ್ಚಲಾಗಿದೆ ಎಂದು ದೃಢಪಡಿಸಿತು. ಸದ್ಯಕ್ಕೆ, ಇದು ಭಾರತದಲ್ಲಿ ಭೇಟಿ ನೀಡಲು ಅನುಮತಿಸದ ಸ್ಥಳಗಳಲ್ಲಿ ಒಂದಾಗಿದೆ.

ಕಾಂಚನಗಂಗಾ, ಸಿಕ್ಕಿಂ

ಭಾರತದ ಅನೇಕ ಪರ್ವತಾರೋಹಿಗಳು ಮತ್ತು ಸಾಹಸ ಪ್ರೇಮಿಗಳು ಪ್ರಪಂಚದ ಮೂರನೇ ಅತಿ ಎತ್ತರದ ಶಿಖರವಾದ ಕಾಂಚನಜುಂಗಾವನ್ನು ಏರಲು ಬಯಸುತ್ತಾರೆ. ದುರದೃಷ್ಟವಶಾತ್, ಇದು ಸಾಧ್ಯವಿಲ್ಲ. ಏಕೆಂದರೆ, ಧಾರ್ಮಿಕ ಕಾರಣಗಳಿಂದಾಗಿ 1991 ರ ನಿಬಂಧನೆಗಳ ಅಡಿಯಲ್ಲಿ 2001ರಲ್ಲಿ ಸಿಕ್ಕಿಂ ಸರ್ಕಾರವು ಕಾಂಚನಜುಂಗಾಕ್ಕೆ ಯಾತ್ರೆಯನ್ನು ನಿಷೇಧಿಸಿದೆ. ದೇವರ ಮೇಲೆ ನಂಬಿಕೆ ಇಲ್ಲದ ವಿದೇಶಿಯರು ಪರ್ವತವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಸ್ಥಳೀಯ ಬೌದ್ಧರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ ನಂತರ ಅದನ್ನು ಮುಚ್ಚಲಾಯಿತು. ಹೀಗಾಗಿ, ಎರಡು ದಶಕಗಳಿಂದ ಮುಚ್ಚಲ್ಪಟ್ಟಿರುವ ಭಾರತದಲ್ಲಿ ನಿಷೇಧಿತ ಸ್ಥಳಗಳಲ್ಲಿ ಒಂದಾಗಿದೆ.

ಚೋಲಮು ಸರೋವರ, ಸಿಕ್ಕಿಂ

ವಿಶ್ವದ ಅತಿ ಎತ್ತರದ ಸರೋವರಗಳಲ್ಲಿ ಒಂದಾದ ಚೋಲಮು ಸರೋವರವು ಪ್ರವಾಸಿಗರಿಗೆ ನಿರ್ಬಂಧಿತವಾಗಿದೆ. Tso Lhamo ಲೇಕ್ ಎಂದೂ ಕರೆಯಲ್ಪಡುವ ಇದು ಟಿಬೆಟ್ ಗಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಆದ್ದರಿಂದ ಇದು ಭಾರತದಲ್ಲಿ ನಿರ್ಬಂಧಿತ ಸ್ಥಳಗಳಲ್ಲಿ ಒಂದಾಗಿದೆ. ಕೇವಲ ಸೇನೆ ಮತ್ತು ಸಿಕ್ಕಿಂ ಪೋಲೀಸ್/ಆಡಳಿತ ಮಾತ್ರ ಸಿಕ್ಕಿಂನ ಚೋಲಮು ಸರೋವರಕ್ಕೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net