

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು.
ಸಾಮಾನ್ಯವಾಗಿ ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು. ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ.
ನಾವೀಗ ವರ್ಷದ ಕೊನೆಯ ತಿಂಗಳಿಗೆ ಪ್ರವೇಶ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ, ಜಾತಕವನ್ನು ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. ಹೀಗಾಗಿ 2025ನೇ ವರ್ಷದ ಸಂಖ್ಯಾಶಾಸ್ತ್ರದ ಮುನ್ನೋಟಗಳನ್ನು ಆಧರಿಸಿ, ಕೆಲ ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರ ಜೀವನದಲ್ಲಿ ಪ್ರಮುಖ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ.
ಅಂದಹಾಗೆ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್ ಸಂಖ್ಯೆ 2+4= 6 ಆಗಿರುತ್ತದೆ. ರಾಶಿಗಳಂತೆ ರಾಡಿಕ್ಸ್ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಯಾವ ದಿನಾಂಕಗಳಲ್ಲಿ ಜನಿಸಿದವರು 2025ರಲ್ಲಿ ಸಕಲ ಸಂಪತ್ತು ಮತ್ತು ಸಮೃದ್ಧಿಯನ್ನು ಸಾಧಿಸಿ, ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ದಿನಾಂಕ 4, 13, 22 ಅಥವಾ 31 ರಂದು ಜನಿಸಿದವರು 2025 ರಲ್ಲಿ ತಮ್ಮ ಜೀವನದಲ್ಲಿ ವಿವಿಧ ರೀತಿಯಲ್ಲಿ ಧನಾತ್ಮಕ ಬದಲಾವಣೆಗಳನ್ನು ನೋಡುತ್ತಾರೆ. ಸಂಖ್ಯೆ 4ರಲ್ಲಿ ಜನಿಸಿದವರ ಅಧಿಪತಿ ಸಾಮಾನ್ಯವಾಗಿ ರಾಹು ಆಗಿರುವುದರಿಂದ, ತಮ್ಮ ಕುಟುಂಬ ಜೀವನದಲ್ಲಿ ಈ ಹಿಂದೆ ಹಲವಾರು ಸಮಸ್ಯೆಗಳನ್ನು ಎದುರಿಸಿರಬಹುದು. ಆದರೆ 2025ರ ಆರಂಭದೊಂದಿಗೆ, ನಿಮ್ಮ ವೃತ್ತಿ ಮತ್ತು ಕುಟುಂಬ ಜೀವನದಲ್ಲಿ ಸಂತೋಷದಾಯಕ ಸಂಗತಿಗಳು ಪ್ರಾರಂಭವಾಗುತ್ತವೆ. ಅನಿರೀಕ್ಷಿತ ನಗದು ಬಹುಮಾನಗಳನ್ನು ಪಡೆಯುವ ಅವಕಾಶವೂ ಇದೆ.
ದಿನಾಂಕ 6, 15 ಮತ್ತು 24 ರಂದು ಜನಿಸಿದವರಿಗೆ 6ನೇ ಸಂಖ್ಯೆ ಅದೃಷ್ಟದ ಸಂಖ್ಯೆಯಾಗಿದೆ. ಈ 6ನೇ ಸಂಖ್ಯೆಯ ಅಡಿಯಲ್ಲಿ ಜನಿಸಿದವರು 2025ರಲ್ಲಿ ಹಣದ ಕೊರತೆಯನ್ನು ಹೊಂದಿರುವುದಿಲ್ಲ. ಸುಧಾರಿತ ಆರ್ಥಿಕ ಪರಿಸ್ಥಿತಿಯಿಂದಾಗಿ, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಸಂತೋಷವಾಗಿರಲು ಅವಕಾಶಗಳಿವೆ. ಹೊಸ ಮನೆ ಮತ್ತು ಭೂಮಿ ಅಥವಾ ವಾಹನದಂತಹ ಹೊಸ ಆಸ್ತಿಗಳನ್ನು ಖರೀದಿಸಲು ಅವಕಾಶವಿದೆ. ಮದುವೆ ಮತ್ತು ಪ್ರೇಮ ಜೀವನದಲ್ಲಿ ಸಂತೋಷದ ತಿರುವುಗಳಿರುತ್ತವೆ.
ದಿನಾಂಕ 8, 17 ಮತ್ತು 26 ರಂದು ಜನಿಸಿದವರು 2025 ರಲ್ಲಿ ಜಾಕ್ಪಾಟ್ ಹೊಡೆಯುವ ಅವಕಾಶವನ್ನು ಹೊಂದಿರುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ಶನಿದೇವನ ಆಳ್ವಿಕೆಗೆ ಒಳಪಟ್ಟಿರುವುದರಿಂದ, ಶನಿಯ ಬೆಂಬಲದಿಂದಾಗಿ ಅವರ ವೃತ್ತಿಪರ ಜೀವನವು ಅತ್ಯುತ್ತಮವಾಗಿರುತ್ತದೆ. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಯಶಸ್ಸನ್ನು ಸಾಧಿಸಲು ಇದು ಉತ್ತಮ ವರ್ಷವಾಗಿರುತ್ತದೆ. ಆದರೆ, ಯಾವುದೇ ಪ್ರಯತ್ನದಲ್ಲಿ ನೀವು ಸ್ವಲ್ಪ ಹೆಚ್ಚಿನ ಶ್ರಮ ವ್ಯಯಿಸಬೇಕಾಗುತ್ತದೆ. ಇದರಿಂದ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ. ಹಣಕಾಸಿನ ವಿಷಯದಲ್ಲಿ ಅನುಕೂಲಕರ ಪರಿಸ್ಥಿತಿಗಳು ಇರುತ್ತವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.