ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ವೈದ್ಯನೋರ್ವ ತನ್ ಪ್ರೇಯಸಿಗಾಗಿ ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಅಪಘಾತವೆಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಕುಮಾರಿ (29), ಕೃಷಿಕಾ (5) ಮತ್ತು ಕೃತಿಕಾ (3) ಎಂದು ಗುರುತಿಸಲಾಗಿದೆ. ಆರೋಪಿ ಬೋಡಾ ಪ್ರವೀಣ್ನನ್ನು (32) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದು, ಹೈ ಡೋಸೇಜ್ ಇರುವ ಔಷಧಿಯನ್ನು ನೀಡಿ ಕೊಂದಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಕುರಿತು ಮಾತನಾಡಿರುವ ACP ಎಸ್.ವಿ. ರಮಣಮೂರ್ತಿ, ಮೇ 28ರಂದು ಬೋಡಾ ಪ್ರವೀಣ್ ಹಾಗೂ ಕುಟುಂಬದವರು ತಮ್ಮ ತವರೂರು ಖಮ್ಮಂಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಹಾಗೂ ಇಬ್ಬರು ಪುತ್ರಿಯರು ಮೃತಪಟ್ಟಿದ್ದಾಗಿ ಆರೋಪಿ ಪೊಲೀಸರ ಬಳಿ ಹೇಳಿದ್ದ.
ಇದನ್ನೂ ಓದಿ: ಆರಂಭದಲ್ಲೇ ನೂತನ ಕೋಚ್ಗೆ ಶಾಕ್; ಗಂಭೀರ್ ಬೇಡಿಕೆಯನ್ನು ತಿರಸ್ಕರಿಸಿದ ಬಿಸಿಸಿಐ
ಆರೋಪಿ ಹೇಳಿಕೆಯನ್ನು ಆಧರಿಸಿ ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದಾಗ ಆತನ ಮೇಲೆ ಸಂಶಯ ಮೂಡಲು ಶುರುವಾಯಿತು. ಇದಲ್ಲದೆ ಅಪಘಾತವಾದಾಗ ಮೈಯಲ್ಲಿರುವ ಮೂಳೆಗಳು ಮುರಿಯಬೇಕಿತ್ತು. ರಕ್ತ ಬಂದು ಗಾಯಗಳು ಇರಬೇಕಿತ್ತು. ಆದರೆ ಇದು ಯಾವುದು ಆಗಿಲ್ಲ. ಹೀಗಾಗಿ ಇಡೀ ಕಾರನ್ನು ಪೊಲೀಸರು ಹುಡುಕಿದಾಗ ಅದರಲ್ಲಿ ಖಾಲಿ ಇರುವ ಸಿರಂಜ್ ಸಿಕ್ಕಿದೆ. ಇದರ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ನಿಜ ಒಪ್ಪಿಕೊಂಡಿದ್ದಾನೆ.
ತನ್ನ ಪತ್ನಿಗೆ ತಾನು ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಚಾರ ತಿಳಿದಿದ್ದರಿಂದ ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಹೈಡೋಸೇಜ್ ಇರುವ ಔಷಧಿ ನೀಡಿ ಪತ್ನಿ ಹಾಗೂ ಉಸಿರುಗಟ್ಟಿಸಿ ಮಕ್ಕಳನ್ನು ಕೊಂದಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ACP ಎಸ್.ವಿ. ರಮಣಮೂರ್ತಿ ತಿಳಿಸಿದ್ದಾರೆ.