ಹುಬ್ಬಳ್ಳಿ: ಇತ್ತೀಚಿನ ವರ್ಷಗಳಲ್ಲಿ ಜನರ ರೀಲ್ಸ್ ಹುಚ್ಚಾಟಕ್ಕೆ ಅಮೂಲ್ಯ ಜೀವಗಳು ಬಲಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಭರದಲ್ಲಿ ಒಂದಿಲ್ಲೊಂದು ಕೆಲಸಕ್ಕೆ ಕೈ ಹಾಕಿ ಜನರು ಇನ್ನಿಲ್ಲದ ಪೇಚಿಗೆ ಸಿಲುಕುತ್ತಾರೆ. ಇದೀಗ ಹುಬ್ಬಳ್ಳಿಯಲ್ಲಿ KSRTC ಚಾಲಕನೋರ್ವ ಬಸ್ ಚಾಲನೆ ವೇಳೆ ರೀಲ್ಸ್ ಮಾಡಲು ಹೋಗಿ ಎರಡು ಎತ್ತು ಹಾಗೂ ರೈತನ ಜೀವಕ್ಕೆ ಕುತ್ತು ತಂದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ನಲ್ಲಿ ಚಾಲಕ ರೀಲ್ಸ್ ಮಾಡಲು ಶುರು ಮಾಡಿದ್ದಾನೆ. ಬಸ್ ಚಾಲನೆ ವೇಳೆ ಸಂಪೂರ್ಣವಾಗಿ ರೀಲ್ಸ್ನಲ್ಲಿ ಮುಳುಗಿದ್ದ ಚಾಲಕನು ಮುಂದೆ ಹೋಗುತ್ತಿದ್ದ ಎತ್ತಿನಗಾಡಿಯನ್ನು ಗಮನಿಸದೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿದ್ದು, ರೈತನಿಗೆ ಗಂಭೀರ ಗಾಯವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯಲ್ಲಿ ರೈತ ಮಂಜುನಾಥ್ ರಂಗಪ್ಪ ಹೆಗ್ಗಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರೈತ ಮಂಜುನಾಥ್ ಅವರ ಮೆದುಳಿನಲ್ಲಿ ಬ್ಲಡ್ ಬ್ಲಾಕ್ ಆಗಿದ್ದು, ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ನಡೆದು 24 ಗಂಟೆಗಳಾದರೂ KSRTC ಅಧಿಕಾರಿಗಳು ಕುಟುಂಬದವರನ್ನು ಭೇಟಿ ಮಾಡಿಲ್ಲ ಎಂದು ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು, ಇತರ ಸವಾರರು ಗಾಯಾಳು ರೈತರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಚಾಲಕನ ಈ ಕೆಲಸಕ್ಕೆ ಹಲವರು ಕಿಡಿಕಾರಿದ್ದಾರೆ.