

ನವದೆಹಲಿ: ಟೀಮ್ ಇಂಡಿಯಾ ನೂತನ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗೌತಮ್ ಗಂಭೀರ್ ಮುಂದೆ ಬೆಟ್ಟದಷ್ಟು ಸವಾಲಿದೆ ಎಂದು ಹೇಳಬಹುದಾಗಿದೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾಗುವ ಸರಣಿಯಲ್ಲಿ ಗಂಭೀರ್ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ.
ತಂಡದಲ್ಲಿ ಕೆಲವೊಂದು ಬದಲಾವಣೆಗಳತ್ತ ಗಮನ ಹರಿಸಿರುವ ಗಂಭೀರ್ ಪ್ರಸ್ತುತ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಅವಧಿಯು ಸಹ ಮುಕ್ತಾಯವಾಗಿದ್ದು, ಅವರ ಸ್ಥಾನಕ್ಕೆ ಬದಲಿ ಕೋಚ್ಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗಂಭೀರ್ ಗಮನಹರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಮ್ ಮುಂದಾಗಿದ್ದಾರೆ.
ಮುಖ್ಯ ಕೋಚ್ ಮಾತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಉಳಿದ ಕೋಚಿಂಗ್ ಸ್ಟಾಫ್ಗೆ ಸಂಬಂಧಿಸಿದ ವಿವರಗಳು ಇನ್ನೂ ಬಾಕಿ ಉಳಿದಿವೆ. ಆದಾಗ್ಯೂ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ, ಫೀಲ್ಡಿಂಗ್ ಕೋಚ್ ಪಾತ್ರಕ್ಕೆ ಜಾಂಟಿ ರೋಡ್ಸ್ ಅವರನ್ನು ಪರಿಗಣಿಸಲಾಗಿದೆ ಎನ್ನಲಾಗುತ್ತಿದೆ. ಕೋಲ್ಕತ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಆಗಿರುವ ಅಭಿಷೇಕ್ ನಾಯರ್ ಅವರನ್ನು ತಮ್ಮೊಂದಿಗೆ ಸೇರಿಕೊಳ್ಳಲು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಇದರೊಂದಿಗೆ ಭಾರತದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಕೂಡ ಗಂಭೀರ್ ಅವರ ಕೋಚಿಂಗ್ ತಂಡದ ಭಾಗವಾಗಲಿದ್ದಾರೆ ಎಂಬ ವದಂತಿಗಳು ಸಹ ಹರಿದಾಡುತ್ತಿವೆ. ರಿಯಾನ್ ಟೆನ್ ಡೋಸ್ಚೇಟ್ ಹಾಗೂ ಲಕ್ಷ್ಮೀಪತಿ ಬಾಲಾಜಿ ಹೆಸರು ಕೂಡ ಕೇಳಿ ಬರುತ್ತಿವೆ.
ಆದರೆ, ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಂಭೀರ್ ನೀಡಿರುವ ಆಯ್ಕೆಯನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ. ಕೇಳಿ ಬಂದಿರುವ ಮಾಹಿತಿ ಪ್ರಕಾರ ಅಭಿಷೇಕ್ ನಾಯರ್ ಹೆಸರಿಗೆ ಬಿಸಿಸಿಐ ಸಮ್ಮತಿ ಸೂಚಿಸಿದ್ದು, ಉಳಿದವರ ಹೆಸರನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ. ಬೌಲಿಂಗ್ ಕೋಚ್ ಆಗಿ 2011ರ ವಿಶ್ವಕಪ್ ವಿಜೇತ ತಂಡದ ಆಟಗಾರ ಜಹೀರ್ ಖಾನ್ ಅವರನ್ನು ನೇಮಿಸಲು ಬಿಸಿಸಿಐ ಉತ್ಸುಕತೆ ತೋರುತ್ತಿದ್ದು, ಇದರ ನಡುವೆಯೇ ಲಕ್ಷ್ಮೀಪತಿ ಬಾಲಾಜಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಅಂತಿಮವಾಗಿ ಬಿಸಿಸಿಐ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.