

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು ಠಾಣೆಯೊಳಗೇ ಎಣ್ಣೆ ಪಾರ್ಟಿ ಮಾಡುತ್ತ ಸಂಭ್ರಮಿಸುತ್ತಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಮೊಹ್ಲಾ ರೈಲ್ಪಾರ್ ಕಂಟ್ರೋಲ್ ರೂಮ್ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಮೂವರು ಅಧಿಕಾರಿಗಳು ಠಾಣೆಯೊಳಗೆ ಮದ್ಯ ಸೇವಿಸುತ್ತಾ ಆರಾಮಾಗಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಅಧಿಕಾರಿಯೋರ್ವ ತನ್ನ ಸಹೋದ್ಯೋಗಿಗಳನ್ನು ಕಿಚ್ಚಾಯಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮೂವರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.