ಜೈಲುಶಿಕ್ಷೆಯಿಂದ ಪಾರಾಗಲು ಸತ್ತಂತೆ ನಟಿಸಿದ, ಆದರೂ ಸಿಕ್ಕಿಬಿದ್ದ ಜಾಣ!

arest april
Published on

ನವದೆಹಲಿ: ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ಕಳ್ಳತನದ ಪ್ರಕರಣದಲ್ಲಿ ಜೈಲುಶಿಕ್ಷೆಯಿಂದ ಪಾರಾಗಲು ತನ್ನದೇ ಮರಣ ಪ್ರಮಾಣಪತ್ರ ಸಲ್ಲಿಸಿ, ಸಿಕ್ಕಿಬಿದ್ದಿದ್ದಾನೆ. ಆತನ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆತನ ಮರಣ ಪ್ರಮಾಣಪತ್ರದಲ್ಲಿ ಹಲವು ರೀತಿಯ ತಪ್ಪುಗಳು ಇದ್ದಿದ್ದರಿಂದ ಆತ ತುಂಬಾ ಸುಲಭವಾಗಿ ಸಿಕ್ಕಿಬಿದ್ದಿದ್ದಾನೆ.

ಅಮೆರಿಕದ ನ್ಯೂಯಾರ್ಕ್​ನ ಹಂಟಿಂಗ್ಟನ್​ ನಿವಾಸಿ ರಾಬರ್ಟ್​ ಬರ್ಜರ್​ (25) ಬಂಧಿತ ಆರೋಪಿ. ನಕಲಿ ಪ್ರಮಾಣಪತ್ರ ಸಲ್ಲಿಸಿ ಜೈಲು ಶಿಕ್ಷೆಯಿಂದ ಪಾರಾಗಲು ಯತ್ನಿಸಿದ್ದಕ್ಕಾಗಿ ನಾಲ್ಕು ವರ್ಷ ಜೈಲುವಾಸ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇತರೆ ಆರೋಪಗಳಲ್ಲಿನ ಶಿಕ್ಷೆಯಿಂದ ಇದು ಹೊರತಾಗಿದೆ.

ಕಳ್ಳತನದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ರಾಬರ್ಟ್​ ಬರ್ಜರ್​ನನ್ನು ಅಪರಾಧಿ ಎಂದು ಕೋರ್ಟ್​ ಘೋಷಿಸಿತ್ತು. ಈ ತಪ್ಪಿಗಾಗಿ ಆತನಿಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸುವ ಸಾಧ್ಯತೆ ಇತ್ತು. ಆದರೆ, ಅಷ್ಟರಲ್ಲಿ ತಲೆಮರೆಸಿಕೊಂಡ ಆತ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತನ್ನ ವಕೀಲರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದ. ಆತನ ಪ್ರೇಯಸಿ ರಾಬರ್ಟ್​ನ ನಕಲಿ ಮರಣ ಪ್ರಮಾಣಪತ್ರವನ್ನು ಆ ವಕೀಲರ ಮೂಲಕ ಕೋರ್ಟ್​ಗೆ ಸಲ್ಲಿಸಿದ್ದಳು.

ಆದರೆ, ಪ್ರಮಾಣಪತ್ರವನ್ನು ಆಮೂಲಾಗ್ರವಾಗಿ ಪರಿಶೀಲಿಸಿದ ಕೋರ್ಟ್​, ಅದರಲ್ಲಿದ್ದ Registry ಎಂಬ ಪದದಲ್ಲಿ ಪದದೋಷ ಇರುವುದನ್ನು ಅಂದರೆ, Regsitry ಎಂದು ಇರುವುದನ್ನು ಗಮನಿಸಿತು. ಅನುಮಾನಗೊಂಡ ಅದು ಪ್ರಮಾಣಪತ್ರವನ್ನು ನೈಜ್ಯತೆಯ ಪರಿಶೀಲನೆಗೆ ರವಾನಿಸಿತು. ಇದನ್ನು ಪರಿಶೀಲಿಸಿದ ನ್ಯೂ ಜೆರ್ಸಿ ಡಿಪಾರ್ಟ್​ಮೆಂಟ್​ ಆಫ್​ ಹೆಲ್ತ್​, ವೈಟಲ್​ ಸ್ಟ್ಯಾಟಿಸ್ಟಿಕ್ಸ್​ ಆ್ಯಂಡ್​ ರೆಜಿಸ್ಟ್ರಿ ಇದೊಂದು ನಕಲಿ ಪ್ರಮಾಣಪತ್ರ ಎಂದು ಹೇಳಿತು. ಅಂದಿನಿಂದ ಮತ್ತೆ ರಾಬರ್ಟ್​ಗಾಗಿ ಹುಡುಕಾಟ ಆರಂಭವಾಯಿತು.

ಪಿಲಿಡೆಲ್ಫಿಯಾದಲ್ಲಿ ಪತ್ತೆ: ಆತನಿಗಾಗಿ ಪೊಲೀಸರು ಹುಡುಕಾಡಲಾರಂಭಿಸಿದರು. ಆತ ಪಿಲಿಡೆಲ್ಫಿಯಾದ ಜೈಲೊಂದರಲ್ಲಿ ಇರುವುದು ಪತ್ತೆಯಾಯಿತು. ಆತ ಜೀವಂತವಾಗಿದ್ದ. ಆದರೆ, ಅರೆಜೀವವಾಗಿದ್ದ. ಕಾನೂನು ಇಲಾಖೆಗೆ ನಕಲಿ ಗುರುತಿನಚೀಟಿ ಕೊಟ್ಟ ಆರೋಪದ ಜತೆಗೆ ಕ್ಯಾಥೋಲಿಕ್​ ಚರ್ಚ್​ನಲ್ಲಿ ಕಳ್ಳತನದ ಮಾಡಿದ ಆರೋಪದಲ್ಲಿ ಆತ ಪೆನ್ಸಿಲ್ವೇನಿಯಾ ಕೋರ್ಟ್​ನಿಂದ ಒಂದು ವರ್ಷದ ಜೈಲುಶಿಕ್ಷೆಗೆ ಗುರಿಯಾಗಿ ಪಿಲಿಡೆಲ್ಫಿಯಾ ಸೆರಮನೆಯ ಕಂಬಿಗಳ ಹಿಂದೆ ಸೇರಿದ್ದ.

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಸ್ಸೌ ಕೌಂಟಿ ಡಿಸ್ಟ್ರಿಕ್ಟ್​ ಅಟಾರ್ನಿ ಮ್ಯಾಡಿಲೀನ್​ ಸಿಂಗಾಸ್​, ಶಿಕ್ಷೆಯಿಂದ ಪಾರಾಗಲು ಜನರು ಎಂತೆಂಥಾ ನಾಟಕಗಳನ್ನು ಆಡುತ್ತಾರೆ ಎಂಬುದನ್ನು ನೋಡುವುದೇ ಒಂದು ಮೋಜು ಎಂದು ಹೇಳಿದ್ದಾರೆ. ಪಿಲಿಡೆಲ್ಫಿಯಾದ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾದ ಆತನಿಗೆ ಜಾಮೀನು ದೊರೆಯಿತು. ಆದರೆ, ಇತರೆ ಪ್ರಕರಣಗಳ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಂಗ ಬಂಧನದಲ್ಲೇ ಮುಂದುವರಿಸುವಂತೆ ನ್ಯಾಯಧೀಶರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net