ಅತಿಯಾಸೆ ಗತಿಗೇಡು: ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳ್ಕೊಂಡ.. ಬಳಿಕ ಕಾರು-ಚೆಕ್​ ಮಾತ್ರವಲ್ಲ, ಲಾಡ್ಜ್​ನಲ್ಲಿ ಪ್ರಾಣ ಕೂಡ ಕಳ್ಕೊಂಡ..

Untitled-1
Published on

ಹೈದರಾಬಾದ್​: ಕರ್ನಾಟಕದಲ್ಲಂತೂ ಸದ್ಯ ಬಿಟ್​ ಕಾಯಿನ್​ ಹಗರಣದಿಂದಾಗಿ ಕ್ರಿಪ್ಟೋಕರೆನ್ಸಿ ವಿಚಾರ ಭಾರಿ ಚಲಾವಣೆಯಲ್ಲಿದೆ. ಹಗರಣದ ಹಿಂದೆ ಒಂದು ಅತಿಯಾಸೆ ಇರುತ್ತದೆ, ಆದರೆ ಇಲ್ಲೊಂದು ಪ್ರಾಣಹರಣದ ಹಿಂದೆಯೂ ಅತಿಯಾಸೆ ಇದೆ. ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿ ಅತಿಯಾಸೆಗೆ ಬಿದ್ದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಹೈದರಾಬಾದ್​ನ ಖಮ್ಮಂ ನಿವಾಸಿ ಜಿ. ರಾಮಲಿಂಗಸ್ವಾಮಿ (36) ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳೆದುಕೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣದ ಸೂರ್ಯಪೇಟೆಯ ಲಾಡ್ಜ್​ವೊಂದರಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಲಾಡ್ಜ್​ನಲ್ಲಿ ತಂಗಿದ್ದ ವ್ಯಕ್ತಿ ಬಾಗಿಲು ಬಡಿದರೂ ತೆಗೆಯದ ಹಿನ್ನೆಲೆಯಲ್ಲಿ ಲಾಡ್ಜ್​ ಮಾಲೀಕ ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಲಾಡ್ಜ್​ ರೂಮ್​ ಒಳಹೊಕ್ಕು ನೋಡಿದಾಗ ರಾಮಲಿಂಗಸ್ವಾಮಿ ಶವ ಕಂಡುಬಂದಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈತ ಮಂಗಳವಾರವೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಾಣ ಕಳೆದುಕೊಳ್ಳುವ ಮುನ್ನ ಈ ವ್ಯಕ್ತಿ ಹೆಂಡತಿಗೆ ವಿಷಯ ತಿಳಿಸಲು ಡೆತ್​ನೋಟ್ ಬರೆದಿಟ್ಟಿದ್ದ. ಈತ ಇನ್ನಿಬ್ಬರು ಸ್ನೇಹಿತರ ಜತೆ ಸೇರಿ ಕ್ರಿಪ್ಟೋಕರೆನ್ಸಿ ಆ್ಯಪ್​ ಮೂಲಕ ಹಣ ಹೂಡಿಕೆ ಮಾಡಿದ್ದ. ಆರಂಭದ ಹತ್ತು ಲಕ್ಷ ರೂಪಾಯಿ ಹೂಡಿಕೆಗೆ ಒಳ್ಳೆಯ ಲಾಭ ಬಂದಿದ್ದರಿಂದ ಬಳಿಕ ಮತ್ತಷ್ಟು ಹೂಡಿಕೆ ಮಾಡಿದ್ದರು. ಆದರೆ 70 ಲಕ್ಷ ರೂ. ನಷ್ಟವಾಗಿತ್ತು.

ಹೂಡಿಕೆಗೆ ಬೇರೆಯವರಿಂದ ಸಾಲ ಪಡೆದಿದ್ದು, ಅವರು ಹಣ ಹಿಂದಿರುಗಿಸುವಂತೆ ಬೆನ್ನುಬಿದ್ದಿದ್ದರು. ಮಾತ್ರವಲ್ಲ ರಾಮಲಿಂಗಸ್ವಾಮಿ ಬಳಸುತ್ತಿದ್ದ ಕಾರು ಹಾಗೂ ಸಹಿ ಮಾಡಿದ್ದ ಚೆಕ್​ಗಳನ್ನೂ ಸಾಲ ಕೊಟ್ಟವರು ಕಿತ್ತುಕೊಂಡಿದ್ದರು. ಹೀಗಾಗಿ ಸಾಲದ ಹೊರೆ ಹಾಗೂ ಸಾಲಗಾರರ ಕಾಟ ತಡೆಯಲಾಗದೆ ರಾಮಲಿಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ಆತನ ಸಂಬಂಧಿಕರು ತಿಳಿಸಿದ್ದಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net