ಇಲ್ಲಿ ರಾತ್ರಿ ಯಾರು ಬೇಕಾದರೂ ನಿರಾತಂಕವಾಗಿ ಸಂಚರಿಸಬಹುದು; ನೈಟ್​ ವಾಕ್​ಗೆ ಇದು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ!

Night
Published on

ದೆಹಲಿ: ಎಲ್ಲಿಯೇ ಆಗಲಿ ರಾತ್ರಿ ಸಮಯದಲ್ಲಿ ಸಂಚರಿಸುವುದೆಂದರೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ರಾತ್ರಿಯಲ್ಲೂ ನಿರಾಂತಕವಾಗಿ ಸಂಚಾರ ಮಾಡಬಹುದಂತೆ. ಅದರಲ್ಲೂ ರಾತ್ರಿಯ ವೇಳೆ ನಡೆದಾಡಲು ಇದು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ದೇಶವಂತೆ.

ಹೌದು.. ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ರಾತ್ರಿ ಹೊತ್ತಲ್ಲಿ ಸಂಚರಿಸಲು ಜಗತ್ತಿನ ಅತಿ ಸುರಕ್ಷಿತ ರಾಷ್ಟ್ರ ಎಂಬ ಹೆಗ್ಗಳಿಕೆ ಇದೀಗ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಸಮೀಕ್ಷೆ 'ದ ಗ್ಯಾಲಪ್ ಗ್ಲೋಬಲ್ ಲಾ ಆ್ಯಂಡ್ ಆರ್ಡರ್​ 2021' ವರದಿ ಪ್ರಕಾರ ಯುಎಇ ಈ ಮನ್ನಣೆಗೆ ಭಾಜನವಾಗಿದೆ.

'ದ ಗ್ಯಾಲಪ್ ಗ್ಲೋಬಲ್ ಲಾ ಆ್ಯಂಡ್ ಆರ್ಡರ್​ 2021' ಸಮೀಕ್ಷೆಯಲ್ಲಿ 95 ಅಂಕಗಳ ಮೂಲಕ ಈ ವಿಷಯದಲ್ಲಿ ಯುಎಇ ಟಾಪ್​-1 ಸ್ಥಾನದಲ್ಲಿದ್ದರೆ, 93 ಅಂಕಗಳ ಮೂಲಕ ನಾರ್ವೆ ಎರಡನೇ ಸ್ಥಾನದಲ್ಲಿದೆ. ಟಾಪ್​-5ರ ನಂತರದ ಮೂರು ಸ್ಥಾನಗಳಲ್ಲಿ ಚೀನಾ, ಸ್ಲೊವೆನಿಯಾ ಮತ್ತು ತೈವಾನ್​ಗಳಿವೆ. ಇನ್ನು ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲೂ ಯುಎಇ ಮುಂಚೂಣಿಯಲ್ಲಿದ್ದು, ಇದರಲ್ಲಿ ಯುಎಇ ಎರಡನೇ ಸ್ಥಾನದಲ್ಲಿದ್ದರೆ, ನಾರ್ವೆ ಮೊದಲ ಸ್ಥಾನದಲ್ಲಿದೆ.

ಯುಎಇ ಇವೆರಡು ಮನ್ನಣೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಯುಎಇ ಉಪಾಧ್ಯಕ್ಷ ಶೇಖ್​ ಮೊಹಮ್ಮದ್ ಬಿನ್​ ರಶಿದ್ ಟ್ವೀಟ್ ಮಾಡಿ ಹೆಮ್ಮೆ ಪಟ್ಟಿದ್ದಾರೆ. 'ಹಗಲು ಇಲ್ಲವೇ ರಾತ್ರಿಯಲ್ಲಿ ಮಹಿಳೆ ಒಬ್ಬಂಟಿಯಾಗಿ ಯಾವುದೇ ಭಯವಿಲ್ಲದೆ ಓಡಾಡುತ್ತಿದ್ದಾಳೆ ಎಂದರೆ ಅವಳು ಎಮಿರೇಟ್ಸ್​ನಲ್ಲಿದ್ದಾಳೆ' ಎಂದು ತಿಳಿದುಕೊಳ್ಳಿ ಎಂದು ಅವರು ಟ್ವೀಟ್​ ಮಾಡಿದ್ದಾರೆ.

'ಮಹಿಳೆಯೊಬ್ಬಳು ರಾತ್ರಿಯಲ್ಲಿ ಮುಕ್ತವಾಗಿ ರಸ್ತೆಯಲ್ಲಿ ಸಂಚರಿಸುವ ದಿನ ಯಾವಾಗ ಬರುತ್ತದೋ ಆವಾಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಬಹುದು' ಎಂಬುದಾಗಿ ಮಹಾತ್ಮ ಗಾಂಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net