ಸತಾಯಿಸುವ ಆಡಳಿತಯಂತ್ರದ ಕಿವಿಹಿಂಡಿದ ಜನಸಾಮಾನ್ಯರು; ವ್ಯವಸ್ಥೆ ಬಗ್ಗೆ ಜನತೆ ಅಸಮಾಧಾನ..

Vidhan Soudha 1
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಜನರ ಅನುಭವದಲ್ಲಿ ಆಡಳಿತ ಯಂತ್ರ ಯಾವ ರೀತಿಯಲ್ಲಿದೆ ಎಂಬುದು ಆಡಳಿತ ಸುಧಾರಣಾ ಆಯೋಗ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದ್ದು, ಜನ ಸಾಮಾನ್ಯರು ಅಚ್ಚರಿಯ ಅಭಿಪ್ರಾಯಗಳನ್ನು ನೀಡಿದ್ದಾರೆ.

ವಿವಿಧ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು 2-3 ಬಾರಿ ಅಲೆದಾಡಿಸುವುದು, ಕಚೇರಿಯಲ್ಲಿ ಕಾಯಿಸುವುದು, ಸರಿಯಾದ ಸಮಯದಲ್ಲಿ ಕಚೇರಿಯಲ್ಲಿ ಹಾಜರಿಲ್ಲದಿರುವುದರ ಬಗ್ಗೆ ಸಾರ್ವಜನಿಕರು ಅಸಮಾಧಾನ ತೋಡಿಕೊಂಡು ಆಗಬೇಕಾದ ಬದಲಾವಣೆ ಬಗ್ಗೆ ಸೂಚ್ಯವಾಗಿ ತಿಳಿಸಿದ್ದಾರೆ. ಆಡಳಿತ ಸುಧಾರಣೆ ಆಯೋಗ-2 ತನ್ನ ಮೊದಲ ವರದಿ ತಯಾರಿಸಲು ಆಹಾರ, ಕಂದಾಯ, ಸಾರಿಗೆ ಇಲಾಖೆಯಲ್ಲಿ ಅಧ್ಯಯನ ಮಾಡಿತ್ತು. ಈ ವೇಳೆ ಈ ಇಲಾಖೆಯ ಸೇವೆಗಳನ್ನು ಬಳಸಿಕೊಂಡ ಸಾರ್ವಜನಿಕರನ್ನು ಸಂರ್ಪಸಿ ಅಭಿಪ್ರಾಯ ಪಡೆದುಕೊಂಡಿತ್ತು.

‘ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಯಲ್ಲಿ ಇರಬೇಕು’, ‘ಅಧಿಕಾರಿಗಳು ಸೌಜನ್ಯಪೂರ್ಣ ನಡವಳಿಕೆ ಹೊಂದಬೇಕು’, ‘ದಲ್ಲಾಳಿಗಳು, ಮೂರನೇ ಪಕ್ಷಕಾರರನ್ನು ಸರ್ಕಾರಿ ಕಚೇರಿಯೊಳಗೆ ಪ್ರವೇಶಿಸಲು ಅವಕಾಶ ಕೊಡಬಾರದು’, ‘ದಾಖಲೆಗಳನ್ನು ಸಲ್ಲಿಸುವಂತೆ ಪದೇಪದೆ ಕೇಳುವ ಚಾಳಿಯನ್ನು ಅಧಿಕಾರಿಗಳು ಬಿಡಬೇಕು’ ಎಂಬ ಸಲಹೆಯನ್ನು ನೀಡಿದ್ದಾರೆ.

ಪ್ರಮಾಣ ಪತ್ರ ವಿತರಣೆ ಕಾಲಾವಧಿ ಅತೀ ಎನಿಸುವಂತಿದ್ದು ಕಡಿಮೆ ಮಾಡಬೇಕು, ಎಲ್ಲ ಸೇವೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸಿಗುವಂತಾಗಬೇಕು, ಅರ್ಜಿಯ ಹಂತವನ್ನು ಎಸ್​ಎಂಎಸ್ ಮೂಲಕ ಕೊಡಬೇಕು ಎಂದು ಜನರು ಅಭಿಪ್ರಾಯ ನೀಡಿದ್ದಾರೆ.

ಸಾರಿಗೆ, ಕಂದಾಯ, ಆಹಾರ ಇಲಾಖೆಗಳಿಗೆ ಸಂಬಂಧಪಟ್ಟಂತೆ ವಿತರಣೆಯಾಗುವ ಐವತ್ತಕ್ಕಿಂತ ಹೆಚ್ಚಿನ ಮಾದರಿಯ ಪ್ರಮಾಣ ಪತ್ರ ವಿತರಿಸಲಾಗುತ್ತಿದ್ದು, ಪ್ರತಿ ಮಾದರಿಯ ಪ್ರಮಾಣ ಪತ್ರ ಪಡೆದುಕೊಂಡ 500ಕ್ಕಿಂತ ಹೆಚ್ಚು ಮಂದಿಯನ್ನು ಸಹಾಯವಾಣಿ ಮೂಲಕ ಸಂರ್ಪಸಲಾಗಿತ್ತು.

ಆದಾಯ ಪ್ರಮಾಣ ಪತ್ರ ದುರ್ಬಳಕೆ ತಡೆಯಲು ತಂತ್ರ: ಆದಾಯ, ಜಾತಿ ಮತ್ತು ಆದಾಯ, ಕೆನೆಪದರವಲ್ಲದ, ಇಡಬ್ಲ್ಯುಎಸ್, ಫಲಾನುಭವಿ ಆಧಾರಿತ ಯೋಜನೆಗಳು, ಸಾಮಾಜಿಕ ಭದ್ರತಾ ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಂದ ಸ್ವಯಂ ಘೋಷಣೆ ಪಡೆದುಕೊಳ್ಳಬೇಕೆಂಬ ಸಲಹೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಒಂದೊಮ್ಮೆ ಸರ್ಕಾರ ಆದ್ಯತೆ ಮೇಲೆ ಇದನ್ನು ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಒಪ್ಪಿಕೊಂಡರೂ ಪ್ರಮಾಣ ಪತ್ರ ಬಳಕೆಯಲ್ಲಾಗುತ್ತಿರುವ ಉದ್ದೇಶಿತ ಅಥವಾ ಗೊತ್ತಿಲ್ಲದೇ ಆಗುತ್ತಿರುವ ತಪ್ಪುಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.

ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಬಯಸುವ ವ್ಯಕ್ತಿ ಸರ್ಕಾರಕ್ಕೆ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು ಎಂದು ಪ್ರಸ್ತಾಪಿಸಲಾಗಿದೆ. ಆ ಸ್ವಯಂ ಘೋಷಣಾ ಪತ್ರದಲ್ಲಿ, ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪಾನ್ ಕಾರ್ಡ್ ಸಂಖ್ಯೆ (ಇದ್ದಲ್ಲಿ), ಅರ್ಜಿದಾರ ಕುಟುಂಬದ ಸದಸ್ಯರ ಹೆಸರು, ಅರ್ಜಿದಾರರ ಉದ್ಯೋಗವನ್ನು ನಮೂದಿಸಬೇಕು. ಅಷ್ಟೇ ಅಲ್ಲದೇ, ಕುಟುಂಬದ ಸ್ಥಿರ ಆಸ್ತಿ ವಿವರ, ಜಮೀನುಗಳ ವಿಸ್ತೀರ್ಣ, ವಾರ್ಷಿಕ ಆದಾಯ, ವಾರ್ಷಿಕ ತೆರಿಗೆ, ಕುಟುಂಬದ ಸದಸ್ಯರ ಉದ್ಯೋಗ, ವಾರ್ಷಿಕ ಆದಾಯ, ಮನೆಯಲ್ಲಿರುವ ವಾಹನಗಳ ವಿವರ, ವಾಣಿಜ್ಯ ವಾಹನವಿದ್ದರೆ ಅದರ ಆದಾಯವನ್ನೂ ನಮೂದಿಸಬೇಕು. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಸ್ಥಿರ ಆಸ್ತಿ ಮೂಲದ ವಾರ್ಷಿಕ ಆದಾಯ, ಉದ್ಯೋಗ ಅಥವಾ ಸ್ವಯಂ ಉದ್ಯೋಗದ ಮೂಲದ ಆದಾಯ, ಚರ ಆಸ್ತಿಗಳ ಆದಾಯ ಸೇರಿ ಒಟ್ಟು ಆದಾಯವನ್ನು ದೃಢೀಕರಣದಲ್ಲಿ ತೋರಿಸಬೇಕಾಗುತ್ತದೆ.

ಕುಟುಂಬದ ಒಟ್ಟು ಆದಾಯ, ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ ನೀಡಿದ್ದರೆ ಪ್ರತಿ ಲಗತ್ತಿಸಬೇಕು. ಕಳೆದ ಆರು ತಿಂಗಳ ಮಾಸಿಕ ವಿದ್ಯುತ್​ಚ್ಛಕ್ತಿ ಬಿಲ್ಲುಗಳ ಸರಾಸರಿ ಮೊತ್ತ, ಇಪಿಎಫ್ ಸಂಖ್ಯೆ ಇದ್ದರೆ ಅದನ್ನೂ ಒದಗಿಸಬೇಕಾಗುತ್ತದೆ.ಇತ್ತೀಚೆಗೆ ಅರ್ಹರೂ ಸಹ ಮಾಹಿತಿ ಮುಚ್ಚಿಟ್ಟು ಕಡಿಮೆ ಆದಾಯ ತೋರಿಸುವ ಪ್ರಮಾಣ ಪತ್ರ ಸಲ್ಲಿಸುವ ಪ್ರಕರಣ ಹೆಚ್ಚುತ್ತಿರುವುದು ಸರ್ಕಾರದ ಗಮನಕ್ಕೂ ಬಂದಿದೆ.

ತಪ್ಪು ನಂಬರ್: ಸರ್ಕಾರದ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವ ಜನರು ಸರಿಯಾದ ಮೊಬೈಲ್ ಸಂಖ್ಯೆ ಕೊಡುತ್ತಿಲ್ಲ ಎಂಬುದೂ ಅಧ್ಯಯನದಲ್ಲಿ ಗೊತ್ತಾಗಿದೆ. ಶೇ.25ಕ್ಕಿಂತ ಹೆಚ್ಚಿನ ಮಂದಿಗೆ ಕರೆ ಮಾಡಿದಾಗ ತಪ್ಪು ಸಂಖ್ಯೆ ಎಂಬುದು ಗೊತ್ತಾಗಿದೆ. ಕೆಲವಂತೂ ದಲ್ಲಾಳಿಗಳಿಗೆ ಕರೆ ಹೋಗಿದ್ದಿದೆ. ಇಂತಹ ಬೆಳವಣಿಗೆ ನಡೆಯಬಾರದೆಂದು ಒಟಿಪಿ ವ್ಯವಸ್ಥೆ ತರುವಂತೆಯೂ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net