

ಇಂದೋರ್: ನವರಾತ್ರಿ (Navaratri) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಉತ್ತರ ಭಾರತದಲ್ಲಿ ನವರಾತ್ರಿಯ ಆಚರಣೆ ಜೋರಿರಲಿದ್ದು, ಇದರಲ್ಲಿ ಪ್ರಮುಖವಾಗಿ ಎಲ್ಲರ ಸೆಳೆಯುವುದು ಎಂದರೆ ಗರ್ಬಾ ನೃತ್ಯ (Garba Dance) ಎಂದರೆ ತಪ್ಪಾಗಲಾರದು. ನವರಾತ್ರಿಯ ದುರ್ಗಾ ಪೂಜೆಯಂದು ಭಕ್ತಾದಿಗಳು ಗರ್ಬಾ ನೃತ್ಯವನ್ನು ಮಾಡಲಿದ್ದು, ಇದೀಗ ಈ ನೃತ್ಯ ಪ್ರಕಾರ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಂಭವವಿದೆ.
ಗರ್ಬಾ ನೃತ್ಯ ಆಯೋಜಿಸುವವರು ಅಲ್ಲಿಗೆ ಬರುವವರಿಗೆ ಗೋಮೂತ್ರ ನೀಡಬೇಕೆಂಬ ಸಲಹೆಯನ್ನು ಇಂದೋರ್ ಜಿಲ್ಲಾಧ್ಯಕ್ಷ ಚಿಂಟು ವರ್ಮಾ ಆಗ್ರಹಿಸಿದ್ದು, ಇದಕ್ಕೆ ಕಾರಣವನ್ನು ಸಹ ನೀಡಿದ್ದಾರೆ. ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಚಿಂಟು ವರ್ಮಾ, ಗರ್ಬಾ (garba) ಪೆಂಡಾಲ್ ಪ್ರವೇಶಿಸಲು ಅನುಮತಿಸುವ ಮೊದಲು ಪ್ರತಿಯೊಬ್ಬರೂ ಗೋಮೂತ್ರದೊಂದಿಗೆ ‘ಆಚಮನ್’ ಮಾಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಘಟಕರನ್ನು ವಿನಂತಿಸಿದ್ದೇವೆ. ಆಧಾರ್ ಕಾರ್ಡ್ ಅನ್ನು ಎಡಿಟ್ ಮಾಡಬಹುದು, ಆದರೆ, ಒಬ್ಬ ವ್ಯಕ್ತಿಯು ಹಿಂದೂ ಆಗಿದ್ದರೆ, ಅವನು ಗೋಮೂತ್ರದ ಆಚಮನದ ನಂತರವೇ ಗರ್ಬಾ ಪೆಂಡಾಲ್ ಪ್ರವೇಶಿಸುತ್ತಾನೆ.
ಒಬ್ಬ ಹಿಂದೂ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಗೋಮೂತ್ರದ ಬೇಡಿಕೆಯನ್ನು ಹೆಚ್ಚಿಸುವುದು ಧ್ರುವೀಕರಣದ ರಾಜಕೀಯದ ಬಿಜೆಪಿಯ ಹೊಸ ತಂತ್ರವಾಗಿದೆ ಎಂದು ಇಂದೋರ್ ಜಿಲ್ಲಾಧ್ಯಕ್ಷ ಚಿಂಟು ವರ್ಮಾ ಹೇಳಿದ್ದಾರೆ.